ಬೆಂಗಳೂರು: ಹೊಸಕೋಟೆಯನ್ನು ಸ್ಯಾಟಿಲೈಟ್ ಟೌನ್ ಆಗಿ ಅಭಿವೃದ್ಧಿಗೊಳಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ, ಸವಲತ್ತುಗಳನ್ನು ವಿತರಿಸಿದ ಅವರು, ಹೊಸಕೋಟೆಯಲ್ಲಿ ಆರ್ಥಿಕ ಚಟುವಟಿಕೆಗೆ ವಿಪುಲ ಅವಕಾಶಗಳಿವೆ. ಕೈಗಾರಿಕೆ, ಉಗ್ರಾಣ ಸೌಲಭ್ಯ, ಕುಡಿಯುವ ನೀರು, ವಿದ್ಯುತ್, ಸ್ವಚ್ಚತೆ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಅಭಿವೃದ್ಧಿಗೊಳಿಸಲು ವಿಶೇಷ ಗಮನ ನೀಡಲಾಗುವುದು. ಮೆಟ್ರೋ ಅಥವಾ ಸಬ್ ಅರ್ಬನ್ ಕಾಮಗಾರಿಗಳನ್ನು ಮುಂದಿನ ಯೋಜನೆಗಳಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದರು.
ಎತ್ತಿನಹೊಳೆ ಯೋಜನೆ 2012 ರಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲೆಂದು ರೂಪುಗೊಂಡಿತು. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದು. ಭೂ ಸ್ವಾಧೀನ ಕಾರ್ಯಕ್ಕೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿಗಳು ತ್ವರಿತಗೊಳಿಸಿ ಬಯಲುಸೀಮೆಗೆ ನೀರನ್ನು ತರುವ ಕೆಲಸ ಮಾಡಲಾಗುವುದು. ಒಂದೂವರೆ ವರ್ಷದಲ್ಲಿ 24 ಟಿಎಂಸಿ ನೀರಿನ ಬಳಕೆ ಮಾಡಲು ಸಾಧ್ಯವಾಗಲಿದೆ. ಹೊಸಕೋಟೆಗೂ ಎತ್ತಿನಹೊಳೆ ನೀರು ತಲುಪಲಿದೆ ಎಂದರು.


















































