ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ (ಎಂಎಂ ಬೆಟ್ಟ) ವನ್ಯಜೀವಿ ವಲಯದಲ್ಲಿ ಐದು ಹುಲಿಗಳ ಸಾವಿಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ವೈ. ಚಕ್ರಪಾಣಿ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಜೂನ್ 26ರಂದು ಹನೂರು ತಾಲ್ಲೂಕಿನ ಎಂಎಂ ಬೆಟ್ಟದ ವಲಯದಲ್ಲಿ ಒಂಬತ್ತು ವರ್ಷದ ಮಡದ ಹುಲಿ ಹಾಗೂ ಅದರ ನಾಲ್ಕು ಮರಿಗಳು ವಿಷ ಸೇವನೆಯಿಂದ ಮೃತಪಟ್ಟಿದ್ದ ಘಟನೆ ಭಾರೀ ಸಂಚಲನ ಮೂಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (APCCF) ಕುಮಾರ್ ಪುಷ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಿ ಸಲ್ಲಿಸಿದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಡಿಸಿಎಫ್ ಚಕ್ರಪಾಣಿ ಹಾಗೂ ಇತರ ಮೂವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಈಶ್ವರ್ ಖಂಡ್ರೆ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.