ಬೆಂಗಳೂರು: ರೈತರಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ ವಿಮೆ ಮಾಡಿಸಿಕೊಳ್ಳುವ ವಿಮಾಕಂಪೆನಿಗಳು ಇನ್ನುಮುಂದೆ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ ಜೊತೆ ಸಂಬಂಧಿಸಿದ ಕುಟುಂಬದ ನಾಮಿನಿಯನ್ನು ಸಹ ಮಾಡಿಸಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಮಾಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ಸಚಿವರು ಬೆಳೆ ವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿದರು.
ಇಷ್ಟುದಿನಗಳ ಕಾಲ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮಾ ಕಂಪೆನಿಗಳು ರೈತರಿಂದ ಬೆಳೆ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಪರಿಗಣಿಸುತ್ತಿರಲಿಲ್ಲ.ಇದರಿಂದ ವಿಮಾದಾರ ರೈತ ಮೃತಪಟ್ಟಲ್ಲಿ ವಿಮೆ ಕಂತು ಪಡೆಯಲು ತೊಂದರೆಯಾಗುತ್ತಿತ್ತು.ರೈತರ ಅನುಕೂಲಕ್ಕಾಗಿ ಇನ್ನುಮುಂದೆ ವಿಮಾಕಂಪೆನಿಗಳು ಕಡ್ಡಾಯವಾಗಿ ರೈತರಿಂದ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.ಅಲ್ಲದೇ ಫಸಲ್ ಬೀಮಾ ಯೋಜನೆ ಮಾಡಿಕೊಳ್ಳುವ ವಿಮಾಕಂಪೆನಿಗಳು ಕೃಷಿ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೇ ಈ ಹಿಂದೆ ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು.ಅಲ್ಲದೇ ಕಚೇರಿ ತೆರೆದ ಲೊಕೇಷನ್ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕೆಂದರು.
ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟನ್ನೇ ಆಧಾರ್ ಕಾರ್ಡ್ಗೆ ಜೋಡಿಸಿ ಆಧಾರ್ಕಾರ್ಡಿನಲ್ಲಿರುವ ಚಾಲಿತ ಬ್ಯಾಂಕ್ ಅಕೌಂಟ್ ಅನ್ನೇ ಬೆಳೆವಿಮೆಗೆ ದಾಖಲಿಸಬೇಕು.ಕೆಲವೆಡೆ ಬಹುತೇಕ ರೈತರ ಆಧಾರ್ ಕಾರ್ಡ್ ಬೆಳೆವಿಮೆಗೆ ಜೋಡಣೆಯಾದರೂ ಕೂಡ ಆಧಾರ್ಕಾರ್ಡ್ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿರದೇ ಇವೆ.ಹೀಗೆ ಚಾಲ್ತಿಯಲ್ಲಿರದ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ಗೆ ಜೋಡಿಸಿರುವುದು ಕಂಡುಬಂದಿದೆ. ಇದರಿಂದ ಬಹುತೇಕ ಕಡೆ ಬೆಳೆವಿಮೆ ಪಡೆಯಲು ರೈತರಿಗೆ ತೊಂದರೆಯುಂಟಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.ರೈತರು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಕೂಡ ಆಧಾರ್ ಕಾರ್ಡಿಗೆ ಜೋಡಿಸಿ ಬೆಳೆವಿಮೆಗೆ ನಮೂದಿಸಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು.ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನೇ ರೈತರು ಬೆಳೆವಿಮೆಗೆ ನಮೂದಿಸಬೇಕು.ಕೆಲವೆಡೆ ಆಧಾರ್ ಕಾರ್ಡನ್ನು ಕುಟುಂಬದ ಸದಸ್ಯರು ಒಟ್ಟೊಟ್ಟಿಗೆ ಮಾಡಿಸುವಾಗ ಕೆಲವೆಡೆ ಬೆರಳಚ್ಚು ತಪ್ಪಾಗಿ ನಮೂದಾಗಿರುವ ತೊಂದರೆಯೂ ಸಹ ಆಧಾರ್ಕಾರ್ಡಿನಲ್ಲಿ ಕಂಡುಬಂದಿದೆ. ಹೀಗಾಗಿ
ಆಧಾರ್ ಕಾರ್ಡಿನಲ್ಲಿರುವ ತೊಂದರೆಗಳನ್ನು ರೈತರು ಕೂಡಲೇ ಸರಿಪಡಿಸಿಕೊಳ್ಳಬೇಕು. ಬೆಳೆವಿಮೆ ಬಗ್ಗೆ ಎಡಿಎ,ಜೆಡಿಎಗಳು ಸಹ ಸರಿಯಾಗಿ ಮಾಹಿತಿ ಪಡೆದು ತಮ್ಕನ್ನು ಸಂಪರ್ಕಿಸುವ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ತಿಳಿಸಿದರು.
ದೇಶದಲ್ಲಿ ಕರ್ನಾಟಕವೇ ಅತಿಹೆಚ್ಚು ಬೆಳೆವಿಮೆಯನ್ನು ನೀಡಿದ ರಾಜ್ಯವಾಗಿದ್ದು,
2018-19ನೇ ಸಾಲಿನಲ್ಲಿ 12.80 ಲಕ್ಷ ರೈತ ಫಲಾನುಭವಿಗಳಿಗೆ ರೂ. 2595.86 ಕೋಟಿಗಳು ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 12.73 ಲಕ್ಷ ರೈತ ಫಲಾನುಭವಿಗಳಿಗೆ ರೂ.2586.27 ಕೋಟಿಗಳ ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 6215 ರೈತರಿಗೆ ರೂ.9.58 ಕೋಟಿಗಳು ಬಾಕಿ ಇರುತ್ತದೆ. 2019-20ನೇ ಸಾಲಿನಲ್ಲಿ 6.81 ಲಕ್ಷ ರೈತ ಫಲಾನುಭವಿಗಳಿಗೆ ರೂ. 771.81 ಕೋಟಿಗಳು ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 6.44 ಲಕ್ಷ ರೈತ ಫಲಾನುಭವಿಗಳಿಗೆ ರೂ.736.37 ಕೋಟಿಗಳ ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 37202 ರೈತರಿಗೆ ರೂ.35.43 ಕೋಟಿಗಳು ಬಾಕಿ ಇರುತ್ತದೆ.
ಸದರಿ ವರ್ಷಗಳ ಎಲ್ಲಾ ಹಂಗಾಮುಗಳಲ್ಲಿ ಬಾಕಿ ಇರುವ ವಿಮಾ ಮೊತ್ತವು ರೈತರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವ ಕಾರಣ/ Account reached maximum Credit limit set on account/ A/c Blocked or Frozen/ Inactive Aadhaar, NPCI failed cases ಕಾರಣಗಳಿಂದ ಬಾಕಿ ಇರುತ್ತದೆ. ಈ ಕುರಿತು ರೈತರು ತಮ್ಮ ತಮ್ಮ ಬ್ಯಾಂಕುಗಳಲ್ಲಿ ಈ ಮೇಲಿನ ಸಮಸ್ಯೆಗಳನ್ನು ಸರಿಪಡಿಸಿ, ಸಂಬಂಧಪಟ್ಟ ವಿಮಾ ಸಂಸ್ಥೆಯವರಿಗೆ ತಿಳಿಸಿದ್ದಲ್ಲಿ ವಿಮಾ ಮೊತ್ತ ಪರಿಹಾರ ವಿತರಿಸಲಾಗುವುದು ಎಂದು ಅಧಿಕಾರಿಗಳಿಂದ ಸಭೆಯಲ್ಲಿ ವಿವರಿಸಲಾಯಿತು.
ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು 2019 ರ ಹಂಗಾಮಿನಲ್ಲಿ14.20 ಲಕ್ಷ ರೈತರು 12.15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಈ ಹಂಗಾಮಿನಲ್ಲಿ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡಿ ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ಒಟ್ಟು 5.65 ಲಕ್ಷ ರೈತ ಫಲಾನುಭವಿಗಳಿಗೆ 658.34 ಕೋಟಿ ರೂ.ಗಳ ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ವಿಮಾ ಸಂಸ್ಥೆಯವರು 4.62 ಲಕ್ಷ ಫಲಾನುಭವಿಗಳಿಗೆ ರೂ.558.88 ಕೋಟಿ ರೂ.ಗಳು ಬೆಳೆ ವಿಮಾ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಿರುತ್ತಾರೆ. ಬಾಕಿ ಉಳಿದ ರೂ.99.46 ಕೋಟಿಗಳು ಇತ್ಯರ್ಥಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿರುತ್ತದೆ.
2019-20 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 6.81 ಲಕ್ಷ ರೈತರು ನೊಂದಣಿಯಾಗಿರುತ್ತಾರೆ. ಸದರಿ ಹಂಗಾಮಿನಲ್ಲಿಯೂ ಸಹ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡುವ ಕಾರ್ಯ NIC ವತಿಯಿಂದ ಪ್ರಗತಿಯಲ್ಲಿದೆ. 2020 ರ ಮುಂಗಾರು ಹಂಗಾಮಿಗೆ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿರುತ್ತಾರೆ. ಒಟ್ಟು 12.81 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತೀರ್ಣವು ಬೆಳೆ ವಿಮೆಗೆ ಒಳಪಡಿಸಲಾಗಿದೆ.
ಪ್ರಗತಿಪರಿಶೀಲನಾ ಸಭೆಯಲ್ಲಿ ಕೃಷಿ ಆಯುಕ್ತ ಬಿಜೇಷ್ ಕುಮಾರ್ ದೀಕ್ಷಿತ್,ಕೃಷಿ ನಿರ್ದೇಶಕ ಶ್ರೀನಿವಾಸ್,ಅಧಿಕಾರಿಗಳಾದ ಆ್ಯಂಥೋನಿ ಇಮ್ಯಾನುಯಲ್,ಲಲಿತಾರೆಡ್ಡಿ,ಶಕೀಲ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.