ಚೆನ್ನೈ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ‘ಆಪರೇಷನ್ ಸಿಂಧೂರ್’ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಅಪರೂಪದ ಒಳನೋಟ ಹಂಚಿಕೊಂಡಿದ್ದಾರೆ. ಮಿಲಿಟರಿ ನಿಖರತೆ ಮತ್ತು ರಾಜಕೀಯ ಸ್ಪಷ್ಟತೆ ಸಂಗಮಗೊಂಡ ಉನ್ನತ ಮಟ್ಟದ ಕಾರ್ಯಾಚರಣೆ ಎಂದು ಅವರು ಬಣ್ಣಿಸಿದರು.
ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 22ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ದಾಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿತೆಂದರು. “ಮರುದಿನವೇ ನಾವು ಚರ್ಚೆಗೆ ಕುಳಿತೆವು. ರಕ್ಷಣಾ ಸಚಿವರು ‘ಸಾಕು ಸಾಕು’ ಎಂದರು. ಮೂವರು ಸೇನಾ ಮುಖ್ಯಸ್ಥರೂ ನಿರ್ಣಾಯಕ ಕ್ರಮಕ್ಕೆ ಒಪ್ಪಿಕೊಂಡು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಇಷ್ಟು ಸ್ಪಷ್ಟ ರಾಜಕೀಯ ನಿರ್ದೇಶನವನ್ನು ಮೊತ್ತಮೊದಲು ನೋಡಿದೆವು,” ಎಂದರು.
ಏಪ್ರಿಲ್ 25ರಂದು ಉತ್ತರ ಕಮಾಂಡ್ ಕೇಂದ್ರದಲ್ಲಿ ಕಾರ್ಯಯೋಜನೆ ರೂಪಿಸಿ ತಕ್ಷಣವೇ ಕಾರ್ಯಗತಗೊಳಿಸಲಾಯಿತು. ಒಂಬತ್ತು ಗುರಿಗಳಲ್ಲಿ ಏಳು ನಾಶವಾಗಿದ್ದು, ಹೆಚ್ಚಿನ ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ ಎಂದು ದ್ವಿವೇದಿ ವಿವರಿಸಿದರು. ಏಪ್ರಿಲ್ 29ರಂದು ಅವರು ಪ್ರಧಾನಿಯನ್ನು ಮೊದಲ ಬಾರಿಗೆ ಭೇಟಿಯಾದರು.
‘ಆಪರೇಷನ್ ಸಿಂಧೂರ್’ ಅನ್ನು ಚದುರಂಗದ ಆಟಕ್ಕೆ ಹೋಲಿಸಿದ ಅವರು, “ಇದು ‘ಬೂದು ವಲಯ’ದಲ್ಲಿ ನಡೆದ ಆಟ. ಶತ್ರುಗಳ ಮುಂದಿನ ನಡೆ ನಮಗೆ ತಿಳಿಯಲಿಲ್ಲ, ನಮ್ಮದು ಅವರಿಗೆ ತಿಳಿಯಲಿಲ್ಲ. ಕೆಲವೊಮ್ಮೆ ಚೆಕ್‌ಮೇಟ್ ತಲುಪಿಸಿದ್ದೇವೆ, ಕೆಲವೊಮ್ಮೆ ಅಪಾಯದಲ್ಲಿದ್ದರೂ ನಿರ್ಧಾರಾತ್ಮಕ ಹೆಜ್ಜೆ ಇಟ್ಟಿದ್ದೇವೆ. ಸಮವಸ್ತ್ರ ಜೀವನವೆಂದರೆ ಇದೇ,” ಎಂದು ಹೇಳಿದರು.
ಸೇನಾ ಮುಖ್ಯಸ್ಥರ ಈ ಹೇಳಿಕೆಗಳು ಕಾರ್ಯಾಚರಣೆ ಯಶಸ್ಸಿನ ಹಿಂದೆ ಮಿಲಿಟರಿ ಸಾಮರ್ಥ್ಯವಷ್ಟೇ ಅಲ್ಲ, ರಾಜಕೀಯ ನಾಯಕತ್ವದ ಸ್ಪಷ್ಟ ನಿಲುವು ಎಷ್ಟು ಮಹತ್ವದ್ದೆಂಬುದನ್ನೂ ಎತ್ತಿಹಿಡಿದವು.