ಬೆಂಗಳೂರು: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವುದು ನಿರ್ಧಾರವಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ. ಕರ್ಫ್ಯೂ ಸಹ ಜಾರಿಯಲ್ಲಿದೆ ಎಂದು ತಿಳಿಸಿದರು.
ಇದು ಸರ್ಕಾರಿ ಪ್ರಾಯೋಜಿತ ಮೆರವಣಿಗೆ, ಸೆಕ್ಷನ್ 144 ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು, ಕಾಂಗ್ರೆಸ್ ನವರು ಈ ಹಿಂದೆ ಸರ್ಕಾರಿ ಪ್ರಾಯೋಜಿತ ಕೆಲಸಗಳನ್ನು ಮಾಡಿದ್ದಾರೆ. ಅದರ ಅನುಭವದಿಂದ ಆ ಮಾತುಗಳು ಆಡಿದ್ದಾರೆ ಎಂದರು.
ದೆಹಲಿ ಪ್ರಯಾಣದ ಬಗ್ಗೆ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿ ‘ಸದ್ಯಕ್ಕೆ ದೆಹಲಿಗೆ ಹೋಗುವ ಉದ್ದೇಶ ಇಲ್ಲ’ ಎಂದರು.