ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಮತಾಂತರ ನಿಷೇಧ ಕಾಯ್ದೆ ಜಾರಿಯ ಮೊದಲ ಹಂತವನ್ನು ಯಶಸ್ವಿಯಾಗಿ ಕ್ರಮಿಸಿದೆ.
ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಕೋಲಾಹಲ ಎಬ್ಬಿಸಿದ್ದ ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಮೇಲ್ಮನೆಯಲ್ಲೂ ಅಂಗೀಕಾರಗೊಂಡರೆ ಹೊಸ ಕಾಯ್ದೆ ಜಾರಿಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾದಂತಾಗುತ್ತದೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ್ದರು. ಇಂದು ಈ ವಿದೇಯಕದ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಆಡಳಿತ ಪ್ರತಿಪಕ್ಷ ನಡುವೆ ಭಾರೀ ಜಟಾಪಟಿ ನಡೆದಿದೆ. ಮಸೂದೆ ವಿರೋಧಿಸಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿ ಸದನದ ಬಾವಿಗೆ ನುಗ್ಗಿ ಗದ್ದಲ ಎಬ್ಬಿಸಿದರು. ಈ ಗದ್ದಲದ ನಡುವೆಯೇ ವಿದೇಯಕವು ಧ್ವನಿಮತದಿಂದ ಅಂಗೀಕಾರಗೊಂಡಿತು.