ಜೈಪುರ: ಐಪಿಎಲ್ 2026ರ 52ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ನಾಯಕ ಶುಭಮನ್ ಗಿಲ್ ಅವರ 44 ಎಸೆತಗಳಲ್ಲಿ 84 ರನ್ ಹಾಗೂ ಸಾಯಿ ಸುದರ್ಶನ್ ಅವರ 36 ಎಸೆತಗಳಲ್ಲಿ 55 ರನ್ ಕೊಡುಗೆ ಮೂಲಕ ಬೃಹತ್ ಮೊತ್ತ ಗಳಿಸಿತು. ಅಂತಿಮ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ 20 ಎಸೆತಗಳಲ್ಲಿ 37 ರನ್ ಬಾರಿಸಿ ತಂಡದ ಮೊತ್ತವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ರಾಹುಲ್ ತೆವಾಟಿಯಾ ನಾಲ್ಕು ಎಸೆತಗಳಲ್ಲಿ 14 ರನ್ ಸಿಡಿಸಿದ ಮೂಲಕ ಗುಜರಾತ್ 229 ರನ್ ಭಾರಿ ಮೊತ್ತ ಕಲೆಹಾಕಿತು.
230 ರನ್ ಗುರಿ ಬೆನ್ನಟ್ಟುವಲ್ಲಿ ರಾಜಸ್ಥಾನ್ ರಾಯಲ್ಸ್ ವಿಫಲವಾಯಿತು. ವೈಭವ್ ಸೂರ್ಯವಂಶಿ ಬೌಂಡರಿಗಳ ಮಳೆಗರೆದು 36 ರನ್‌ಗಳನ್ನು ದಾಖಲಿಸಿದರೂ, ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ರಾಜಸ್ಥಾನ್ ತಂಡ 152 ಗಳಿಸಿ 77 ರನ್‌ಗಳಿಂದ ಭಾರೀ ಸೋಲು ಅನುಭವಿಸಿತು.
ಬಲಿಷ್ಠ ರಾಜಸ್ಥಾನ್ ತಂಡವನ್ನು ಸ್ಪಷ್ಟ ಅಂತರದಲ್ಲಿ ಮಣಿಸಿದ ಗುಜರಾತ್, ಲೀಗ್‌ನ ಏಳನೇ ಗೆಲುವು ದಾಖಲಿಸಿ ಒಟ್ಟು 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇದೇ ವೇಳೆ ಐದನೇ ಸೋಲಿನ ಮುಖಾಮುಖಿಯಾದ ರಾಜಸ್ಥಾನ್ ರಾಯಲ್ಸ್ ಐದನೇ ಸ್ಥಾನಕ್ಕೆ ಸರಿದಿದೆ.





































































