ರಾಮನಗರ: ನಮ್ಮ ಮೇಲೆ ಸುಳ್ಳು ಕೇಸ್ ಹಾಕಿ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ವಿಧಾನಸಭೆಯಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆಗೆ ಜನಸಾಮಾನ್ಯರು ಬಹಳ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ ಎಂದರು.
ಈ ಪಾದಯಾತ್ರೆ ಹೋರಾಟ ಮಾಡಬೇಕು ಎಂದು ಬಹಳ ಹಿಂದೆಯೇ ತೀರ್ಮಾನ ಮಾಡಿದ್ದೆವು. ಈ ಬಗ್ಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲೂ ಮಾಹಿತಿ ನೀಡಿದೆವು. ಅದರಂತೆ ಜ. 9 ರಂದು ಸಂಗಮದಿಂದ ಪಾದಯಾತ್ರೆ ಆರಂಭಿಸಿ ರಾಮನಗರದವರೆಗೂ ನಾಯಕರು, ಕಾರ್ಯಕರ್ತರು ಯಶಸ್ವಿಯಾಗಿ ಪಾದಯಾತ್ರೆ ಮಾಡಿದ್ದೇವೆ. ಇಂದು 5ನೇ ದಿನ ರಾಮನಗರದಿಂದ ಆರಂಭವಾಗಬೇಕಿತ್ತು. ಆದರೆ ಕೋವಿಡ್ 3ನೇ ಅಲೆ ವೇಗವಾಗಿ ಹರಡುತ್ತಿದೆ. ನಿನ್ನೆ 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಜವಾಬ್ದಾರಿಯುತ ಪಕ್ಷವಾಗಿ ನಾವು ಇದಕ್ಕೆ ಸ್ಪಂದಿಸಬೇಕಾಗಿದೆ ಎಂದರು.
ಸೋಂಕು ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ, ಬಿಜೆಪಿಯವರೆ ಕಾರಣ. 3ನೇ ಅಲೆ ಪ್ರಾರಂಭವಾದ ನಂತರ ಸಿಎಂ ಸಭೆ ಮಾಡುವುದನ್ನು ನಿಲ್ಲಿಸಲಿಲ್ಲ. ಜ.6ರಂದು ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 5-6 ಸಾವಿರ ಜನರನ್ನು ಸೇರಿಸಿ, ಮುಖ್ಯಮಂತ್ರಿ ಸೇರಿದಂತೆ ಅನೇಕ ಮಂತ್ರಿಗಳು ಭಾಗವಹಿಸಿದ್ದರು. ನಂತರ ಬಿಜೆಪಿ ಶಾಸಕ ಸುಭಾಷ್ ಗುತ್ತೆದಾರ್ ಪ್ರತಿಭಟನೆ ಮಾಡಿದರು, ರೇಣುಕಾಚಾರ್ಯ ಅವರು ಜಾತ್ರೆ ಮಾಡಿದರು, ಕೇಂದ್ರ ಸಚಿವರು 2ನೇ ಅಲೆ ಸಮಯದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಜನಾಶೀರ್ವಾದ ಯಾತ್ರೆ ಮಾಡಿದರು. ಈಗ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಜಾತ್ರೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ ಇವರ ಮೇಲೆ ಮಾತ್ರ ಕೇಸ್ ಹಾಕಿಲ್ಲ. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಸರ್ಕಾರ ಪಕ್ಷಪಾತ ಮಾಡುತ್ತಿದೆ. ರೋಗ ನಿಯಂತ್ರಿಸಲು ನಿಷ್ಪಕ್ಷಪಾತ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಇವರ ಉದ್ದೇಶ ಒಳ್ಳೆಯದಿಲ್ಲ. ಅವರ ಉದ್ದೇಶ ಪಾದಯಾತ್ರೆ ನಿಲ್ಲಿಸುವುದು. ಅದಕ್ಕಾಗಿ ಅಧಿಕಾರಿಗಳ ಮೂಲಕ ನಿತ್ಯ ಒಂದಲ್ಲ ಒಂದು ಆದೇಶ ಹೊರಡಿಸಿದರು ಎಂದು ದೂರಿದರು.
ನಾವು ಇದಕ್ಕೆಲ್ಲ ಹೆದರುವುದಿಲ್ಲ. ಸೋಂಕು ಹೆಚ್ಚಾದರೆ ಅದು ಪಾದಯಾತ್ರೆಯಿಂದಲ್ಲ. ದೇಶದೆಲ್ಲೆಡೆ ಸ್ವಾಭಾವಿಕವಾಗಿ 3ನೆ ಅಲೆ ಹಬ್ಬುತ್ತಿದೆ. ರಾಜ್ಯದ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ನಮ್ಮ ಪಾದಯಾತ್ರೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಚರ್ಚೆ ಮಾಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ನಮ್ಮ ಯಾತ್ರೆ ಬೆಂಗಳೂರು ಪ್ರವೇಶಿಸಿ, 19 ರಂದು ನಡೆಯಬೇಕಿದ್ದ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ಸಾಧ್ಯತೆಯಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಕೋವಿಡ್ ಅಲೆ ಕಡಿಮೆಯಾಗಿ, ನಿಯಮ ಸಡಿಲಗೊಂಡ ನಂತರ ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ ಎಂದವರು ತಿಳಿಸಿದರು.
ನಮ್ಮ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುವುದು ಬೇಡ. ರಾಮನಗರದಿಂದ ಮತ್ತೆ ಆರಂಭವಾಗಿ ಎಲ್ಲಿ ಮುಗಿಯಬೇಕು ಎಂದು ತೀರ್ಮಾನ ಮಾಡಿದ್ದೆವೋ ಅಲ್ಲೇ ಮುಕ್ತಾಯವಾಗಲಿದೆ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಜನರ ಒಳಿತು ಬಯಸುವ ಪಕ್ಷ. ಜನರ ಒಳಿತೇ ಕಾಂಗ್ರೆಸ್ ಧ್ಯೇಯ ಎಂದರು.