ಬೆಳಗಾವಿ: ಮೂರುಬದಿನಗಳ ಕಾಲ ಸದನದಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲು ಹಾಗೂ ಉತ್ತರವನ್ನು ಕೇಳಿ ಜನಪರ ನಿಲುವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ ಎಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿರುವ ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ ಎಂದು ಲೇವಡಿ ಮಾಡಿದ್ದಾರೆ. ಕೇವಲ ಭಾಷಣ ಮತ್ತು ಧರಣಿಗಾಗಿ ಬೆಳಗಾವಿ ಅಧಿವೇಶನ ಕ್ಕೆ ಅವರು ಬಂದಿದ್ದಾರೆ. ಇವರಿಗೆ ಉತ್ತರಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೊಂದ ರೈತರಿಗೆ ಪರಿಹಾರ ಸಿಗುವುದು ಪ್ರತಿ ಪಕ್ಷದವರಿಗೆ ಬೇಕಾಗಿಲ್ಲ. ನಾವು ಪರಿಹಾರವನ್ನು ಅಧಿಕ ವಾಗಿ ಕೊಟ್ಟಿದ್ದೇವೆ. ಉತ್ತರ ಕರ್ನಾಟಕ ಅಭಿವೃದ್ಧಿ ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಾಡಿದ್ದೇವೆ. ಉಳಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಬಗ್ಗೆ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದರು.
ಯಾವ ಕಾನೂನನ್ನು ತರಬೇಕು ಎನ್ನುವುದು ಸರಕಾರದ ಹಕ್ಕು. ಜನಪರ ಧ್ವನಿಯಾಗಿ ವಿಧೇಯಕವನ್ನು ಮಂಡಿಸುವ ಸಮಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಇರಲಿಲ್ಲ. ಸದನದಲ್ಲಿ ಮಂಡನೆಯಾಗುವ ಸಮಯದಲ್ಲಿ ಇರಬೇಕಾದದ್ದು ಪ್ರತಿಪಕ್ಷದ ಕರ್ತವ್ಯ. ಕಾಲಾವಕಾಶ ಇದ್ದರೂ ಸದನದಲ್ಲಿ ಹಾಜರಾಗದೆ ಇರುವುದು ಬೇಜವಾಬ್ದಾರಿತನ. ಹಾಗಾಗಿ ರಾಜ್ಯದಲ್ಲಿರುವುದು ಅತ್ಯಂತ ಬೇಜವಾಬ್ದಾರಿ ವಿರೋಧಪಕ್ಷವೆಂದು ಅವರು ಟೀಕಿಸಿದರು.
ಹೆಚ್ಚುವರಿ ಅಜೆಂಡಾದಲ್ಲಿ ವಿಧೇಯಕವನ್ನು ಸೇರಿಸಿ ಮಂಡಿಸಲಾಗಿದೆ. ಸ್ಪೀಕರ್ ಅವರಿಗೆ ಪೂರಕ ಅಜೆಂಡಾ ತಯಾರು ಮಾಡುವ ಅಧಿಕಾರವಿದೆ. ಅವರ ಪರಮಾಧಿಕಾರವನ್ನು ಬಳಸಿಕೊಂಡು ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಆದ್ದರಿಂದ ಇದೊಂದು ಬೇಜಾಬ್ದಾರಿ ಪಕ್ಷ ಎಂದು ಅವರು ಹೇಳಿದರು.
ಮತಾಂತರ ಜ್ವಲಂತ ಸಮಸ್ಯೆ.
ಹಲವಾರು ಮನೆತನಗಳಿಗೆ ಕುಟುಂಬಗಳಿಗೆ ಮತಾಂತರದಿಂದ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ನಾವು ತಡೆಗಟ್ಟಬೇಕಾಗಿದೆ. ಅದಕ್ಕೆ ಕಾನೂನಿನಲ್ಲಿ ಮತ್ತು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಗೆ ನಾಳೆ ಸದನದಲ್ಲಿ ಅವಕಾಶವಿದೆ. ವಿಧೇಯಕದಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ರಾಜಕೀಯ ವೋಟ್ಬ್ಯಾಂಕ್ ಸಲುವಾಗಿ ಇಂದು ಕಾಂಗ್ರೆಸ್ ಸದನವನ್ನು ಬಾಯ್ಕಾಟ್ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವುದು ಜವಾಬ್ದಾರಿ ತನದಿಂದ ಕೂಡಿರುವ ವಿರೋಧ ಪಕ್ಷ ಎಂದು ಅವರು ಹೇಳಿದರು.