ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ನಗರಕ್ಕಿರುವ ಘನತೆ, ಗೌರವವನ್ನು ಉಳಿಸಿಕೊಳ್ಳಬೇಕು. ಬಹಳ ಹಿಂದಿನಿಂದಲೂ ಬೇರೆ ರಾಜ್ಯ ಹಾಗೂ ದೇಶಗಳಿಂದ ಉದ್ದಿಮೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಡೆ ಗಮನಹರಿಸದೇ, ಸಮಾಜದ ಧೃವೀಕರಣ, ಕೋಮುವಾದದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಸರ್ಕಾರ ತಾನು ಸರ್ವ ಸ್ಪರ್ಶಿ ಹಾಗೂ ಸರ್ವ ವ್ಯಾಪಿ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಂಡರು. ಆದರೆ ತಾವು ಘೋಷಿಸಿದ ಬಜೆಟ್ ಅನ್ನೇ ಸರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದರು.
ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ನಗರ ಅಥವಾ ರಾಜ್ಯಕ್ಕೆ ಏನಾದರೂ ಕೊಡುಗೆ ಬಂತಾ? ಇಲ್ಲ. ಇನ್ನು ರಾಜ್ಯದಿಂದ ಆಯ್ಕೆಯಾಗಿ ಹಣಕಾಸು ಸಚಿವೆಯಾದ ನಿರ್ಮಲಾ ಸೀತರಾಮನ್ ಅವರು ಮತ್ತೊಮ್ಮೆ ರಾಜ್ಯದಿಂದ ಆಯ್ಕೆಯಾಗುತ್ತಿದ್ದಾರೆ. ಅವರು ರಾಜ್ಯದಿಂದ ಆಯ್ಕೆ ಯಾಗಿರುವುದಕ್ಕೆ ಜನರಿಗೆ, ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ವಿಶೇಷ ಕೊಡುಗೆ, ಉಡುಗೊರೆ ನೀಡಿದ್ದಾರಾ? ಯಾವುದಾದರೂ ಯೋಜನೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಡಿಕೆಶಿ, ಈಗ ಮಳೆ ಬಂದು ಅವಾಂತರವಾದ ನಂತರ ಬಿಜೆಪಿಯವರು ಛತ್ರಿ ಹಿಡಿದುಕೊಂಡು ಸಿಟಿ ರೌಂಡ್ಸ್ ಹಾಕುತ್ತಿದ್ದೇನೆ ಎಂದರೆ ಹೇಗೆ? ನಮ್ಮ ಬಡಾವಣೆಯಲ್ಲಿ ಚೆನ್ನಾಗಿರುವ ರಸ್ತೆಯನ್ನು ಕಿತ್ತು ಮತ್ತೆ ಬೇರೆ ರಸ್ತೆ ಹಾಕುತ್ತಿದ್ದಾರೆ. ಆದರೆ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸುತ್ತಿಲ್ಲ ಎಂದರು.
ಬೆಂಗಳೂರು ನಗರದ ಘನತೆ ಉಳಿಸಲು ಶಾಸಕರ ಸಭೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸರ್ಕಾರ ಎಲ್ಲ ಶಾಸಕರ ಸಭೆ ಮಾಡಿದರೆ ಕಾಂಗ್ರೆಸ್ ಶಾಸಕರೂ ಭಾಗವಹಿಸುತ್ತಾರಲ್ಲವೇ, ಭಾಗವಹಿಸಿದರೆ ಅವರು ಧ್ವನಿ ಎತ್ತುತ್ತಾರೆ ಅವರಿಗೆ ಅಪಮಾನವಾಗುತ್ತದೆಯಲ್ಲ. ಹಿಗಾಗಿ ಸಭೆ ಮಾಡಲು ಹಿಂಜರಿಯುತ್ತಿದ್ದಾರೆ’ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಆರೋಪ ಮಾಡುತ್ತಲೇ ಇರುತ್ತಾರೆ, ನಾವು ಕೇಳಿಸಿಕೊಳ್ಳೋಣ. ನಮ್ಮ ಕೆಲಸ ನಾವು ಮೋಡೋಣ. ಬೆಂಗಳೂರಿನ ಜನರಿಗಾಗಿಯೇ ನಾವು ಮೇಕೆದಾಟು ಹೋರಾಟ ಮಾಡಿದೆವು. ನಾವು ನಮ್ಮ ಕರ್ತವ್ಯವನ್ನು ಹಿಂದೆಯೂ ಮಾಡಿದ್ದು, ಈಗಲೂ ಮಾಡುತ್ತಿದ್ದು, ಮುಂದೆಯೂ ಮಾಡುತ್ತೇವೆ. ಮುಂದಿನ ಚುನಾವಣೆಗೆ ನಾವು ಬೆಂಗಳೂರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದವನು. ನನಗೆ ಬೆಂಗಳೂರಿನ ಬಗ್ಗೆ ನನ್ನದೇ ಆದ ಕಲ್ಪನೆ ಇದೆ. ಬೆಂಗಳೂರಿನ ಪ್ರಾಮುಖ್ಯತೆ, ಒಂದೂವರೆ ಕೋಟಿ ಜನ ಕಟ್ಟುತ್ತಿರುವ ತೆರಿಗೆ, ಇಲ್ಲಿ ಬಂಡವಾಳ ಹೂಡಲು ಎಷ್ಟು ಜನ ಮುಂದಾಗಿದ್ದರು, ಅವರನ್ನು ಹೇಗೆ ಉಳಿಸಿಕೊಳ್ಳಬೇಕು, ಇಲ್ಲಿ ಸಂಪಾದನೆ ಮಾಡಿದರೆ ಮಾತ್ರವೇ ನಾವು ಹಳ್ಳಿಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯ ಎಂಬುದು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕ್ರಮಗಳು’ ಎಂದು ಉತ್ತರಿಸಿದರು.












































































