ಮೈಸೂರು: ಆರೋಗ್ಯ ಕರ್ನಾಟಕ ಕಟ್ಟಬೇಕು ಎಂಬುದು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಗುರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ.ಕೆ.ಸುಧಾರ್ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಅಂಗವಾಗಿ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಉದ್ಯಾನವನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ಬಂದಂತಹ ಸಂದರ್ಭದಲ್ಲಿ ಲಸಿಕೆ ಬರುವುದಿಲ್ಲ. ಈ ಸರ್ಕಾರ ಮಾರ್ಗಸೂಚಿಗಳನ್ನಾಗಲಿ ಅಥವಾ ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುತ್ತಿಲ್ಲ ಎಂದು ಪ್ರಾರಂಭದಿಂದ ಟೀಕೆಗಳನ್ನು ಮಾಡಲಾಗುತ್ತಿತ್ತು. ಲಸಿಕೆ ಬಂದಂತಹ ಸಂದರ್ಭದಲ್ಲಿ ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೂ ಸಹ ಟೀಕಿಸಲಾಗಿತ್ತು. ಈ ಲಸಿಕೆಯ ಬಗ್ಗೆ ಸಾಕಷ್ಟು ತಪ್ಪು ಸಂದೇಶ ಹಾಗೂ ಮಾಹಿತಿಗಳು ಹೋದವು. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದದ್ದು ಉಂಟು ಎಂದರು.
ನಮ್ಮ ದೇಶಿಯ ಲಸಿಕೆಯನ್ನು ದೇಶದ ಕಂಪನಿಗಳೇ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್ ಅನ್ನು ತಯಾರಿಸಿದವು. ಡಿಸೆಂಬರ್ ವೇಳೆಗೆ ಲಸಿಕೆಯನ್ನು ಹೊರತಂದು ವಿಶ್ವದ ಇತರೆ ಲಸಿಕೆಗಳ ಜೊತೆಗೆ ಸರಿಸಮಾನವಾಗಿ ಹೊರಬಂದಿರುವುದು ಐತಿಹಾಸಿಕವಾದದ್ದು. ಇದು ಆತ್ಮನಿರ್ಬರ ಭಾರತದ ಮೂಲಕ ಮೋದಿ ಅವರ ಕನಸು ನನಸಾಗಿದೆ ಎಂದರು.
ಕೋವಿಡ್ 3ನೇ ಅಲೆಯ ಪ್ರಮಾಣ ಕಡಿಮೆ ಪ್ರಮಾಣದಲ್ಲಿಯೇ ಇದೆ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ. ಒಂದುವೇಳೆ 3ನೇ ಅಲೆ ಬಂದರೂ ಅದನ್ನು ನಿಯಂತ್ರಿಸುವ ಕಾರ್ಯ ಮಾಡಲಾಗುವುದು. ಈಗಾಗಲೇ ಮಕ್ಕಳಿಗೆ ಲಸಿಕೆ ನೀಡಲು ಟ್ರಯಲ್ ನಡೆಯುತ್ತಿದೆ. ಶೀಘ್ರವಾಗಿ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಇದ್ದರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಂದಂತಹ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಾಗಿದೆ. ಇದರಿಂದ ಬಡಜನರಿಗೆ ಲಕ್ಷಾಂತರ ರೂ ಉಳಿತಾಯವಾಗಲಿದೆ ಎಂದು ಹೇಳಿದರು.
ಶಾಸಕರಾದವರು ರಸ್ತೆಗಳನ್ನು, ಕಟ್ಟಡಗಳನ್ನು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ ಶಾಸಕ ರಾಮದಾಸ್ ಅವರು ಕ್ಷೇತ್ರದ ಮನೆಯ ಸದಸ್ಯರಾಗಿ ಪ್ರತಿಯೊಬ್ಬರ ಆರೋಗ್ಯವನ್ನು ವಿಚಾರಿಸುತ್ತಿರುವುದು ವಿನೂತನವಾದ ಕಾರ್ಯಕ್ರಮವಾಗಿದೆ ಎಂದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ದಾನಿಗಳು ಕಡಿಮೆಯಾಗಿದ್ದು, ಕೋವಿಡ್ ಮಾತ್ರ ಕಡಿಮೆಯಾಗಿಲ್ಲ. ರಕ್ತದ ಅವಶ್ಯಕತೆ ಹಾಗೆ ಇದೆ. ನಮ್ಮಲ್ಲಿನ ಸಂಶೋಧನಕಾರರು ಎಲ್ಲವನ್ನೂ ಕಂಡುಹಿಡಿದಿದ್ದರೂ ಕೃತಕ ರಕ್ತವನ್ನು ತಯಾರು ಮಾಡುವುದನ್ನು ಸಾಧ್ಯವಾಗಿಲ್ಲ. ಹೀಗಾಗಿ ರಕ್ತಕ್ಕೆ ಪರ್ಯಾವಾಗಿ ಬೇರೆ ಇಲ್ಲ. ಅದು ರಕ್ತವೇ ಆಗಿದೆ. ಹೀಗಾಗಿ ರಕ್ತದಾನ ಒಂದು ಪುಣ್ಯವಾದ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಎಸ್.ಎ.ರಾಮದಾಸ್, ಎಂ.ಎಂ.ಸಿ.ಆರ್.ಐ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ವಿಜಯಾನಂದ ತೀರ್ಥಸ್ವಾಮೀಜಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹದೇವ ಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.