ಬೆಂಗಳೂರು: ಕೊರೋನಾ ಪರಿಸ್ಥಿತಿಯಿಂದಾಗಿ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಡುವೆ ಅನ್‌ಲಾಕ್ ಪ್ರಕ್ರಿಯೆ ನಂತರ ಪರಿಸ್ಥಿತಿ ತಿಳಿಗೊಂಡಿದ್ದರೂ ಹಲವಾರು ಕ್ಷೇತ್ರಗಳು ಇನ್ನೂ ಸಂಕಷ್ಟದಲ್ಲಿವೆ. ಇನ್ನೊಂದೆಡೆ ನಾಡಿನ ದೇಗುಲಗಳೂ ಬಡವಾಗಿವೆ.
‘ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾತು ಸರ್ವಕಾಲದಲ್ಲೂ ಪ್ರಚಲಿತದಲ್ಲಿರುತ್ತದೆ. ಆದರೆ ಇದೀಗ ಕೊರೋನಾ ಸಂಕಟ ಕಾಲದಲ್ಲಿ ದೇವರ ಮುಂದೆ ಮೊರೆ ಇಡಲು ದೇವಾಲಯಗಳು ಪರೊಪೂರ್ಣವಾಗಿ ಮುಕ್ತವಾಗಿಲ್ಲ. ಹಾಗಾಗಿ ಜನಸಾಮಾನ್ಯರು ಹರಕೆ, ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವಕಾಶ ನೀಡಲು ಸಾಧ್ಯವಿದೆಯಾದರೂ ಸರ್ಕಾರಕ್ಕೆ ಇಚ್ಚಾಶಕ್ತಿಯ ಕೊರತೆ ಇದೆ ಎಂಬುದು ಧಾರ್ಮಿಕ ಪ್ರಮುಖರ ಆರೋಪ.
. ದುರ್ಗಾಪರಮೇಶ್ವರಿ ದೇವಾಲಯದ ಮಹಾಪೂಜೆ:
https://youtu.be/ZbPjqbkqlU0
ಪ್ರಸ್ತುತ ಅನ್‌ಲಾಕ್ ಪ್ರಕ್ರಿಯೆ ವೇಳೆ, ಮಾಲ್‌ಗಳಿಗೆ ಅವಕಾಶ ಸಿಕ್ಕಿದೆ. ಬಸ್ ಸಹಿತ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ದೇವಾಲಯಗಳಲ್ಲಿ ವಿಶೇಷ ಪೂಜೆ ಪುರಸ್ಕಾರಕ್ಕೆ ಸರ್ಕಾರ ಅವಕಾಶ ನೀಡಿಲ್ಲವೇಕೆ ಎಂಬುದು ಭಕ್ತರ ಅಳಲು. ಈ ರೀತಿಯ ಹಲವಾರು ಸಲಹೆಗಳನ್ನು ಭಕ್ತರು ಉದಯ ನ್ಯೂಸ್ ಬಳಿ ನೀಡಿದ್ದಾರೆ.
ಯಾವುದೇ ಸಂಧಿಕಾಲದಲ್ಲಿ ಆಸ್ತಿಕರು ಮೊರೆ ಹೋಗುವುದು ಬಂಗವಂತನತ್ತ. ಹೀಗಿರುವಾಗ ದೇವಾಲಗಳೇ ನಮಗೆಲ್ಲಾ ಶಕ್ತಿಕೇಂದ್ರ. ಹಾಗಾಗಿ ಪೂಜೆ, ಸೇವೆಗಳಿಗೆ ಅವಕಾಶ ನೀಡಬೇಕೆಂದು ಭಕ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ.. ದೇಗುಲ ಕೈಂಕರ್ಯಗಳಿಗೆ ಸಿಗದ ಅವಕಾಶ.. ‘ಪ್ರಭು’ ನಡೆ ಬಗ್ಗೆ ಅರ್ಚಕರ ಅಸಮಾಧಾನ
ಇದೇ ವೇಳೆ, ರಾಜ್ಯದಲ್ಲಿ ಬಾರ್‌ಗಳಲ್ಲಿ ತೀರ್ಥ ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ ಬಹುಕೋಟಿ ಭಕ್ತರಿಗೆ ಉಚಿತ ತೀರ್ಥ ನೀಡುವ ದೇಗುಲಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ. ದೇವರ ಕೆಲಸಕ್ಕೆ ಅಡ್ಡಿಯಾದರೆ ಮುಖ್ಯಮಂತ್ರಿಗೆ ಶ್ರೇಯಸ್ಸಲ್ಲ ಎಂದು ಭಕ್ತರು, ಅರ್ಚಕರು ಅಸಮಾಧಾನ ಹೊರಹಾಕಿದ್ದಾರೆ
ಈ ನಡುವೆ, ಸರ್ಕಾರ ಅವಕಾಶ ಕೊಟ್ಟರೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ವಿಶೇಷ ಪೂಜೆ ಕೈಗೊಳ್ಳಲು ತಾವು ಸಿದ್ದ ಎಂದು ಅರ್ಚಕ ಸಮೂಹವು ಸರ್ಕಾರಕ್ಕೆ ಸಂದೇಶ ರವಾನಿಸಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ದಕ್ಷಿಣ ಭಾರತದ ಪ್ರಸಿದ್ದ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಹಿರಿಯ ಅರ್ಚಕರಾದ ಅನಂತ ಆಸ್ರಣ್ಣ ಅವರು, ದೇಗುಲಗಳಲ್ಲಿನ ಸೇವೆ, ವಿಶೇಷ ಪೂಜೆಗಳಿಗಿರುವ ನಿರ್ಬಂಧವನ್ನು ತೆಗೆದು ಹಾಕಲು ಇದು ಸಕಾಲ ಎಂದಿದ್ದಾರೆ.
ಈ ನಡುವೆ, ಉದಯ ನ್ಯೂಸ್ ಅಭಿಪ್ರಾಯ ಸಂಗ್ರಹಿಸಿದ ವೇಳೆ ಸಾರ್ವಜನಿಕರಿಂದ ಹಲವು ರೀತಿಯ ಸಲಹೆಗಳು ಸಿಕ್ಕಿವೆ:
- ದೇಗುಲಗಳಲ್ಲಿ ನಿತ್ಯ ಸೇವೆ ಆರಂಭವಾಗಬೇಕು. ಇದರಿಂದಲೇ ಸೋಂಕು ಹರಡುತ್ತದೆ ಎಂಬ ಮಾತು ಸರಿಯಲ್ಲ.
- ದೇವರ ದರ್ಶನವೊಂದರಿಂದಲೇ ಪುನೀತರಾಲ್ಲ. ಸೇವೆ, ತೀರ್ಥ ಪ್ರಸಾದಕ್ಕೂ ಅವಕಾಶ ಸಿಗಲಿ.
- ವಿಶೇಷ ಪೂಜೆ, ಹೋಮ, ಹವನಗಳೇ ಸಮಾಜಕ್ಕೆ ಶ್ರೀರಕ್ಷೆ. ಪರಿಸ್ಥಿತಿ ತಿಳಿಗೊಂಡಿರುವ ಈ ಸಂದರ್ಭದಲ್ಲಿ ಇದಕ್ಕೆ ಅವಕಾಶ ಸಿಗಲಿ.
- ಸಾರ್ವಜನಿಕ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ಮುಂದುವರಿದರೂ ಪರವಾಗಿಲ್ಲ, ದೇವಾಲಯಗಳಲ್ಲಿ ವಿಶೇಷ ಹೋಮ ಹವನಕ್ಕೆ ಅವಕಾಶ ಸಿಗಬೇಕು.
- ಒಂದು ವಿಶೇಷ ಪೂಜೆಯಲ್ಲಿ ನಿರ್ದಿಷ್ಟ ಜನ ಪಾಲ್ಗೊಳ್ಳುವ ಮಿತಿ ನಿಗದಿ ಪಡಿಸಿ ಕೈಂಕರ್ಯಕ್ಕೆ ಅವಕಾಶ ನೀಡಲಿ.
- ಕೋವಿಡ್ ಮಾರ್ಗಸೂಚಿ ಕಠಿಣ ನಿಯಮ ಜಾರಿಯಿದ್ದಾಗಲೂ ಮದುವೆ, ತಿಥಿಯಂತಹಾ ಕಾರ್ಯಕ್ರಮಗಳು ನೆರವೇರುತ್ತಿದ್ದವು. ಕುಟುಂಬ ಸದಸ್ಯರಷ್ಟೇ ಪಾಲ್ಗೊಳ್ಳುತ್ತಿದ್ದರು.
- ದೇವಾಲಯಗಳಲ್ಲಿ ಪೂಜೆ, ಹೋಮ ನಡೆದಾಗಲೂ ಸೇವಾಕರ್ತರ ಕುಟುಂಬದವರಿಗಷ್ಟೇ ಭಾಗವಹಿಸಲು ಅವಕಾಶ ಇರುವುದು.
- ಪ್ರತೀ ದೇವಾಲಯದಲ್ಲಿ ಇಂತಿಷ್ಟೇ ವಿಶೇಷ ಪೂಜೆ ಎಂದು ಸರ್ಕಾರ ನಿರ್ಧರಿಸಲಿ
- ಪ್ರತೀ ಪೂಜೆಯಲ್ಲಿ ಪೂಜಾ ಸ್ಥಳಕ್ಕನುಗುಣವಾಗಿ, ಅರ್ಚಕರು ಸೇರಿ ಇಂತಿಷ್ಟೇ ಜನರು ಉಪಸ್ಥಿತರಿರಬಹುದು ಎಂದು ನಿಗದಿಪಡಿಸಲಿ.
- ಸಾಮೂಹಿಕ ಪೂಜೆಗೆ ಅವಕಾಶ ಇಲ್ಲವಾದರೂ, ನಿರ್ದಿಷ್ಟ ಸಂಖ್ಯೆಯ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವ ಕೈಂಕರ್ಯಗಳಿಗೆ ಅವಕಾಶ ಸಿಗುವಂತಾಗಲಿ.
- ಜನಸಂದಣಿಗೆ ಕಾರಣವಾಗುವ ಅನ್ನಸಂತರ್ಪಣೆ ಪುನರಾಂಭಕ್ಕೆ ಭಕ್ತರ ಒತ್ತಡ ಇಲ್ಲ.
ಈ ಸಂಬಂಧ ವಿವಿಧ ದೇಗುಲಗಳ ಅರ್ಚಕರು, ಧಾರ್ಮಿಕ ವಲಯದ ಪ್ರಮುಖರು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಲ್ಲಿ ಮನವಿ ಮಾಡಿ, ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಾದಿಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆನ್ನಲಾಗಿದೆ.