ಉಡುಪಿ: ತೌಕ್ತೆ ಚಂಡಮಾರುತ ಕರಾವಳಿ ಪ್ರದೇಶವನ್ನು ಲಯದ ಸಮೀಪಕ್ಕೆ ಕೊಂಡೋಯ್ದಿದೆ. ಅತ್ತ ಮಹಾರಾಷ್ಟ್ರದಲ್ಲಿ ಹಲವರನ್ನು ಬಲಿತೆಗೆದುಕೊಂಡು, ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿದೆ ಅಷ್ಟೇ ಅಲ್ಲ, ಕರುನಾಡ ಕರಾವಳಿಯಲ್ಲೂ ಚಂಡಮಾರುತದ ರುದ್ರನರ್ತನಕ್ಕೆ ಹಲವು ಪರಿವಾರಗಳು ತತ್ತರಗೊಂಡಿವೆ.
ಉಡುಪಿ ಜಿಲ್ಲೆಯ ಹಲವೆಡೆ ತೌಕ್ತೆ ಹೊಡೆತದಿಂದಾಗಿ ಮೀನುಗಾರ ಕುಟುಂಬಗಳು ಅತಂತ್ರವಾಗಿದೆ. ಮೀನುಗಾರರಷ್ಟೇ ಅಲ್ಲ, ಕಡಲ ತಡಿಯ ಬಡಪಾಯಿಗಳೆಲ್ಲರೂ ಸಂಕಷ್ಟಕ್ಕೊಳಗಾಗೊದ್ದಾರೆ. ಸಂಕಷ್ಟದಲ್ಲಿರುವ ಮಂದಿಯ ಪಾಲಿಗೆ ಉದ್ಯಮಿ ಪೂಜಾರಿ ಆಪತ್ಬಾಂದವರಂತೆ ನೆರವಾಗಿ ಇಡೀ ನಾಡಿನ ಗಮನಸೆಳೆದಿದ್ದಾರೆ.
ಕುಂದಾಪುರ, ಬೈಂದೂರು ಆಸುಪಾಸಿನಲ್ಲಿ ಬಿರುಗಾಳಿ ಮಳೆಯ ಹೊಡೆತಕ್ಕೊಳಗಾಗಿ ಹಲವು ಮನೆಗಳು ಹಾನಿಗೀಡಾಗಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಸ್ಥಳೀಯ ಯುವಕರೊಂದಿಗೆ ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ, ರಕ್ಷಣಾ ಪರಿಹಾರ ಕಾರ್ಯಾಚರಣೆಗೆ ಮುಂದಾದರು. ಹಲವರ ಬದುಕು ಮೂರಾಬಟ್ಟೆಯಾಗಿದ್ದನ್ನು ಕಂಡು ಮಮ್ಮಲ ಮರುಗಿದರು.
ಬೆಂಗಳೂರಿನ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ChefTalkನ ಮಾಲೀಕರಾಗಿರುವ ಗೋವಿಂದ ಬಾಬು ಪೂಜಾರಿಯವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ತವರು ಜಿಲ್ಲೆ ಉಡುಪಿಗೆ ಆಗಮಿಸಿದ್ದರು. ಈ ವೇಳೆ ಬೈಂದೂರು ಸುತ್ತಮುತ್ತ ಹಳ್ಳಿಗಳಲ್ಲಿನ ಕಿಡಿಯುವ ನೀರಿನ ಸಮಸ್ಯೆ ಬಗೆಹರಿಸಲೆಂದು ಯುವಕರ ಸೈನ್ಯ ಕಟ್ಟಿದ್ದರು. ಜೀವಜಲವನ್ನಂತೂ ಪೂರೈಸುವ ಕಾರ್ಯ ಪರಿಪೂರ್ಣವಾಗುವಷ್ಟರಲ್ಲಿ ಪಕ್ಕದ ಊರಲ್ಲಿ ತೌಕ್ತೆ ಚಂಡಮಾರುತ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಇದೇ ಯುವಕರ ಸೈನ್ಯದೊಂದಿಗೆ ಆ ಸಂತ್ರಸ್ಥ ಹಳ್ಳಿಗಳಿಗೆ ದೌಡಾಯಿಸಿದ ಗೋವಿಂದ ಬಾಬು ಪೂಜಾರಿ, ಅನೇಕರಿಗೆ ಮನೆ ದುರಸ್ತಿ ಮಾಡಿ ಬದುಕಿಗೆ ನೆರವಾದರು. ಅನೇಕ ಕುಟುಂಬಗಳಿಗೆ ಹಣಕಾಸಿನ ನೆರವನ್ನೂ ನೀಡಿದರು. ಅನ್ನ ಆಹಾರದ ಅಗತ್ಯವಿರುವ ಕುಟುಂಬಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಕಲ್ಪಿಸಿದರು.
ಬೈಂದೂರಿನ ಯೋಜನಾನಗರದಲ್ಲೂ ಪ್ರಕೃತಿ ವಿಕೋಪಕ್ಕೆ ಮರಗಳು ಉರುಳಿಬಿದ್ದು ಅನೇಕ ಮನೆಗಳು ಹಾನಿಗೀಡಾಗಿದ್ದವು. ನೊಂದ ಈ ಕುಟುಂಬಗಳಿಗೂ ಗೋವಿಂದ ಬಾಬು ಪೂಜಾರಿಯವರು ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದರು.
ಯಾರು ಈ ಗೋವಿಂದ ಬಾಬು ಪೂಜಾರಿ..?
ಬೆಂಗಳೂರು ಮೂಲದ ಖ್ಯಾತ ಆಹಾರೋದ್ದಿಮೆ ಸಂಸ್ಥೆ ChefTalk ಕಂಪೆನಿಯ ಸಂಸ್ಥಾಪಕರಾಗಿರುವ, ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿಯವರು, ಮಹಾರಾಷ್ಟ್ರ, ಆಂಧ್ರ, ದೆಹಲಿ, ಗುಜರಾತ್, ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ತಮ್ಮ ಕಂಪೆನಿಯನ್ನು ವಿಸ್ತರಿಸಿ ಸುಮಾರು 6000 ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಇದೀಗ ಮೀನುಗಾರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮತ್ಸ್ಯಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಚಿಪ್ಸ್, ಖಾದ್ಯಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಿದ್ದಾರೆ. ಕರಾವಳಿಯ ಯುವಜನರಿಗೆ ಉದ್ಯೋಗ ಕಲ್ಪಿಸಲು ರೆಸಾರ್ಟ್ ಸಹಿತ ಪ್ರವಾಸೋದ್ಯಮ ಯೋಜನೆಗೂ ಮುನ್ನುಡಿ ಬರೆದಿದ್ದಾರೆ. ಸ್ವ ಉದ್ಯೋಗ ಕೈಗೊಳ್ಳಲು ಬಯಸುವ ಮಂದಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ಹತ್ತಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿರುವ ಇವರು, ಅನೇಕರಿಗೆ ವೈದ್ಯಕೀಯ ನೆರವು ನೀಡಿ ಆಪತ್ಪಾಂಧವನೆನಿಸಿದ್ದಾರೆ. ಮುಂದೆ ಆಧುನಿಕ ಸೌಲಬ್ಯದ ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಜನರಿಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸುವ ಹೆಬ್ಬಯಕೆ ಗೋವಿಂದ ಬಾಬು ಪೂಜಾರಿ ಅವರದ್ದು.