ಪಾತಕಲೋಕದ ಕಾರಸ್ಥಾನದಲ್ಲಿ ಪೊಲೀಸ್ ಕಮೀಷನರ್ ಶಶಿಕುಮಾರ್ ನಡೆಸಿದ ಕಾರ್ಯಾಚರಣೆ ‘ನೆಮ್ಮದಿ ಮಂಗಳೂರು’ ಎಂಬ ಜನರ ಕನಸು ನನಸಿಗೆ ಮುನ್ನುಡಿ ಬರೆದಂತಿದೆ. ಇವರಿಗೆ ಸಾಥ್ ನೀಡಿದ್ದರು ಡಿಸಿಪಿ ವಿನಯ್ ಗಾವಂಕರ್..
ಮಂಗಳೂರು: ಭೂಗತ ಪಾತಕಿಗಳ ಕಾರಸ್ಥಾನ ಎಂದೇ ಗರುತಾಗಿರುವ ಕರಾವಳಿಯಲ್ಲಿ ಪೊಲೀಸರು ಮತ್ತೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಎನ್.ಶಶಿಕುಮಾರ್ ಇಂದು ಬೆಳ್ಳಂಬೆಳಿಗ್ಗೆ ಅಖಾಡಕ್ಕೆ ಧುಮುಕಿ, ರೌಡಿ ಗುಂಪಿನಲ್ಲಿ ಗುರುತಿಸಿಕೊಂಡವರಿಗಾಗಿ ಭರ್ಜರಿ ಬೇಟೆಯಾಡಿದ್ದಾರೆ. ಸಿಸಿಬಿ ಮುಖ್ಯಸ್ಥ ವಿನಯ ಗಾವಂಕರ್ ಜೊತೆ ಮಂಗಳೂರಿನ ಮೂಲೆ ಮೂಲೆಗಳಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ಪಾತಕ ಲೋಕಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಏನಿದು ದಿಢೀರ್ ಕಾರ್ಯಾಚರಣೆ?
ಹೇಳಿ ಕೇಳಿ ಮಂಗಳೂರು ಮತ್ತು ಸುತ್ತಮುತ್ತಲ ಅನೇಕ ಪ್ರದೇಶಗಳು ವಿವಿಧ ಭೂಗತ ದೊರೆಗಳ ಮೂಲಸ್ಥಾನ. ಪಾತಕಿಗಳ ಕಾರಸ್ಥಾನ ಎಂದೇ ಬಿಂಬಿತವಾಗಿರುವ ಕರಾವಳಿಯಲ್ಲಿ ಬನ್ನಂಜೆ ರಾಜಾ, ರವಿಪೂಜಾರಿ ಹಾಗೂ ದಾವೂದ್ ಹೆಸರಲ್ಲಿ ಒಂದಿಲ್ಲೊಂದು ಪುಂಡಾಟದ ಪ್ರಕರಣಗಳು ಪ್ರತಿಬಿಂಬಿಸುತ್ತಲೇ ಇವೆ. ಕೆಲ ದಿನಗಳ ಹಿಂದಿನ ಗೋಡೆ ಬರಹಗಳ ಹಿಂದೆಯೂ ಪುಡಿ ಪಾತಕಿಗಳ ನಂಟು ಇದೆ ಎಂಬುದನ್ನು ಪತ್ತೆ ಹಚ್ಚಲು ಹೊರಟಿರುವ ಪೊಲೀಸ್ ಕಮೀಷನರ್ ಶಶಿಕುಮಾರ್, ಇಂದು ವಿವಿಧ ಪೊಲೀಸ್ ತಂಡಗಳೊಂದಿಗೆ ರೌಡಿಗಳ ವಿರುದ್ದ ದಿಢೀರ್ ಕಾರ್ಯಾಚರಣೆ ಕೈಗೊಂಡರು.
ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಪರಾಧ ವಿಭಾಗದ ಡಿಸಿಪಿ ವಿನಯ ಗಾವಂಕರ್ ಜೊತೆ ರಣವ್ಯೂಹ ರೂಪಿಸಿದ ಶಶಿಕುಮಾರ್ ಇಂದು ಬೆಳಗಾಗುವುದರೊಳಗೆ ಅನೇಕರನ್ನು ಬಲೆಗೆ ಬೀಳಿಸಿ, ಅಪರಾಧದ ನಂಟನ್ನು ಕಳಚಿಕೊಳ್ಳುವಂತೆ ಎಚ್ಚರಿಕೆ ನೀಡಿದರು.
ಮಂಗಳೂರು ನಗರಕ್ಕೆ ಅಪಾಯಕಾರಿ ಎನಿಸಿದ್ದ ರೌಡಿ ಚಟುವಟಿಕೆಗಳಿಗೆ ಅಂಕುಶ ಹಾಕುವ ಸಂಕಲ್ಪ ಮಾಡಿರುವ ಕಮೀಷನರ್ ಶಶಿಕುಮಾರ್ ಬಂದರು ನಗರಿಯ ಇತಿಹಾಸದಲ್ಲೇ ಅಪೂರ್ವ ಎಂಬಂತೆ ಈ ಕಾರ್ಯಾಚರಣೆ ಕೈಗೊಂಡು ತಮ್ಮ ಖದರ್ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ.. ಸೀಮಂತ್ ಕುಮಾರ್ ಸಿಂಗ್’ಗೆ ಎಸಿಬಿ ಸಾರಥ್ಯ, ಶಶಿಕುಮಾರ್ ಮಂಗಳೂರು ಪೊಲೀಸ್ ಕಮೀಷನರ್..
ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಹಾಗೂ ಅಪರಾಧ ಲೋಕದೊಂದಿಗೆ ನಂಟಿರುವವರನ್ನು ಗುರುತಿಸಿ, ಅವರಲ್ಲಿ ಬಹುಪಾಲು ಮಂದಿಯನ್ನು ಠಾಣೆಗಳಿಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಹಿಂದೆ ಜನಸ್ನೇಹಿ ಎಸ್ಪಿ; ಈಗ ಖಡಕ್ ಕಾಪ್..
ರೌಡಿಗಳ ‘ಸಹವಾಸಪ್ರಿಯ’ರನ್ನು ಕರೆತಂದು ಒಂದೇ ಕೋಣೆಯೊಳಗೆ ಗುಡ್ಡೆ ಹಾಕಿಸಿದ ಆಯುಕ್ತ ಶಶಿಕುಮಾರ್, ತನ್ನದೇ ಶೈಲಿಯಲ್ಲಿ ನೀತಿ ಪಾಠ ಹೇಳಿ ಗಮನಸೆಳೆದರು. ದಕ್ಷತೆಯ ಪಾಠ ಹೇಳಿಕೊಟ್ಟರು.
ರೌಡಿಗಳೆನಿಸಿದವರು ಏನಾದರು? ಅವರಿಂದ ಯುವಜನರಿಗೆ ಏನಾಗಿದೆ. ಈಗ ಅಂಥವರು ಎಲ್ಲಿ ಹೇಗಿದ್ದಾರೆ? ಎಂಬ ಬಗ್ಗೆ ಸಾಲು ಸಾಲು ಬೌದ್ದಿಕ ಪಾಠ ಮಾಡಿದ ಅವರು, ತಮ್ಮ ಈ ಸಲಹೆಯನ್ನು ಮೀರಿ ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ನಿಷ್ಟುರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
ಹಿಂದೆ ಜನಸ್ನೇಹೀ ಎಸ್ಪಿ ಎಂದೇ ಗುರುತಾಗಿರುವ ಶಶಿಕುಮಾರ್, ಈಗ ಬಂದರು ನಗರಿಯ ಕಮೀಷನರ್ ಆಗಿ ‘ನೆಮ್ಮದಿ ಮಂಗಳೂರು’ ನಿರ್ಮಾಣಕ್ಕೆ ಮುನ್ನುಡಿ ಬರೆದಂತಿದೆ.