ವಿಜಯಾಪುರ: ರಾಜ್ಯದ ಉಪಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಅದರಲ್ಲೂ ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ನಡುವೆ ಆರೋಪ ಪ್ರತ್ಯಾರೋಪಗಳು ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.
ಹಳೆಯ ಕಥೆಗಳನ್ನು ಕೆದಕುತ್ತಿರುವ ಈ ನಾಯಜರ ನಡುವೆ ಇದೀಗ ಆಡಿಯೋ ಬಾಂಬ್ ಕುರಿತ ಸಂಗತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
‘ಅವರು ನನ್ನ ಬಳಿ ಆಡಿಯೋ ಇದೆ ಎಂದು ಹೇಳಿದ್ದಾರಲ್ಲ, ಅದನ್ನು ಹೊರಗೆ ಬಿಡಲಿ. ಯಾವ ಯಾವ ಆಡಿಯೋಗಳು ಇವೆ ಎಂಬುದನ್ನು ಬಹಿರಂಗ ಮಾಡಲಿ’ ಎಂದು ಜಮೀರ್ ಅಹಮದ್ʼಗೆ ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಇವರು ಈಗ ಫಾರೂಕ್ ಬಗ್ಗೆ ಮಾತನಾಡುತ್ತಿದ್ದಾರೆ, ಅದೇ ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಗೆ ಕೆಸಿ ರಾಮಮೂರ್ತಿ ಅವರನ್ನು ಗೆಲ್ಲಿಸಲು ಮಾತೃಪಕ್ಷಕ್ಕೆ ದ್ರೋಹ ಮಾಡಿದವರು ಯಾರು? ಈಗ ರಾಮಮೂರ್ತಿ ಅವರು ಎಲ್ಲಿದ್ದಾರೆ? ಇದಕ್ಕೆ ಉತ್ತರ ನೀಡಲಿ ಎಂದು ಹೆಚ್ಡಿಕೆ ಚಾಟಿ ಬೀಸಿದರು.
ಹೌದು. ನಾನು ಕಸ ತೆಗೆಸುತ್ತಿದ್ದೆ. ಓದುವಾಗಲೇ ಈ ಕೆಲಸ ಮಾಡುತ್ತಿದ್ದೆ. ಇದರಲ್ಲಿ ಅವಮಾನ ಏನಿದೆ? ಆಮೇಲೆ ನಮ್ಮ ತಂದೆಯವರು ಬೇಡವೆಂದರು. ಆ ಕೆಲಸವನ್ನು ಅಲ್ಲಿಗೇ ಬಿಟ್ಟೆ. ಆಮೇಲೆ ಓದು ಮುಗಿದ ಮೇಲೆ ಸಿನಿಮಾ ಹಂಚಿಕೆದಾರನಾದೆ. ನಾನು ನನ್ನ ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.