ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಎರಡು ವರ್ಷಗಳ ಕೋವಿಡ್ ನಡುವೆಯೂ ಕ್ಷೇತ್ರದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಪ್ರತಿನಿತ್ಯ ಕ್ಷೇತ್ರದ ಜನತೆ ಜೊತೆ ನಿಂತು ಕೆಲಸ ಮಾಡುವ ನನ್ನ ಪರ ಮತದಾರರ ಒಲವಿದೆಯೇ ವಿನಃ 5 ವರ್ಷಕ್ಕೆ ಅಳುತ್ತ ಬರುವ ವ್ಯಕ್ತಿಗಲ್ಲ ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಕೇಂಗೆರಿಯಲ್ಲಿ ಚುನಾವಣಾ ಪ್ತಚಾರ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ರೋಡ್ ಶೋ ನಡೆಸಿದರು. ಸಂಸದರಾದ ಡಿ.ವಿ. ಸದಾನಂದಗೌಡ, ರಾಜಸ್ಥಾನದ ಶಾಸಕರಾದ ಅವಿನಾಶ್ ಗೆಹ್ಲೋಟ್, ಜಾರ್ಖಂಡ್ ಶಾಸಕರಾದ ಮನೀಶ್ ಜೈಸ್ವಾಲ್ ಸೇರಿದಂತೆ ನಗರ, ಗ್ರಾಮಾಂತರ ಮಂಡಲದ ಅಧ್ಯಕ್ಷರು ಭಾಗವಹಿಸಿದ್ದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಶೇ.80ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು ಕೆಲವೇ ಕಾಮಗಾರಿ ಬಾಕಿಯಿದೆ. ಕೋವಿಡ್ ಇರದಿದ್ದರೆ ಎಲ್ಲವೂ ಸುಸೂತ್ರವಾಗಿ ನೆರವೇರುತ್ತಿತ್ತು ಎಂದರು. ಯಶವಂತಪುರದ ಜನತೆ ಯಾರು ಕೆಲಸ ಮಾಡುತ್ತಾರೆ? ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೆ? ಎಂಬುದನ್ನು ಗಮನಿಸಿ ಮತ ನೀಡುತ್ತಾರೆ. ಕೇವಲ ಕಣ್ಣೀರಾಕಿದಾಕ್ಷಣ ಮತದಾರರು ಕರಗುವುದಿಲ್ಲ. ಅವರು ಬುದ್ಧಿವಂತರಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ಐದು ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೂ ಚುನಾವಣೆ ಘೋಷಣೆಯಾಗುವಾಗ. ಉಳಿದ ದಿನಗಳಲ್ಲಿ ಕ್ಷೇತ್ರದ ಜನರು ನೆನಪಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋಲು ಗೆಲ್ಲುವ ಸಾಮಾನ್ಯ. ಸೋತಾಕ್ಷಣ ಕ್ಷೇತ್ರದಲ್ಲಿ ಕಣ್ಮರೆಯಾಗಿ ಈಗ ಬಂದು ಕಣ್ಣೀರು ಹಾಕಿದರೆ ಜನ ಕರಗುತ್ತಾರೆಯೇ? ಕೋವಿಡ್ ಸಮಯದಲ್ಲಿ ಜನ ಕಣ್ಣೀರಾಕುವಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಒಳಚರಂಡಿ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕೋವಿಡ್ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಸ್ತ್ರೀ ಶಕ್ತಿ ಸಂಘಗಳನ್ನು ಉಚಿತವಾಗಿ ನೋಂದಾಯಿಸಿ, ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಜೆಡಿಎಸ್ ಅಭ್ಯರ್ಥಿ ಯಾವುದಾದರೂ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿದ್ದರೆ ತಿಳಿಸಿ ಎಂದರು.