ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರಚಾರ ರಂಗೇರಿದ್ದು ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅನೇಕ ನಾಯಕರು ಬಿಜೆಪಿ ಸೇರಿದ್ದಾರೆ. ಹೊನ್ನಗನಹಟ್ಟಿ, ಯಲಚಗುಪ್ಪೆ, ಕೆ.ಗೊಲ್ಲಹಳ್ಳಿ, ತರಳು, ಕಗ್ಗಲಿಪುರ ಪಂಚಾಯತಿ ಸೇರಿದಂತೆ ನಾನಾ ಕಡೆಗಳಲ್ಲಿ ಮತಯಾಚಿಸಿದರು. ಮತಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್, ಕೋವಿಡ್ ನಂಥ ಸಂಕಷ್ಟದ ಸಮಯದಲ್ಲಿ ನಾನು ಮನೆಯಲ್ಲಿ ಕೂರದೆ ಕ್ಷೇತ್ರ ಸಂಚಾರ ಮಾಡಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ಮನೆಮನೆಗೆ ವ್ಯಾಕ್ಸಿನ್, ಫುಡ್ ಕಿಟ್ ವಿತರಣೆ ಮಾಡಿದ್ದೇನೆ. ಕಷ್ಟದ ಸಮಯದಲ್ಲಿ ಅವರ ಜೊತೆ ನಿಂತಿದ್ದನ್ನು ಕ್ಷೇತ್ರದ ಜನ ಮರೆತಿಲ್ಲ ಎಂದರು.
ಲಾಕ್ ಡೌನ್ ಸಂದರ್ಭದಲ್ಲಿ ಮನೆ ಬಾಗಿಲಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುವುದರ ಜೊತೆಗೆ ಸೋಂಕಿಗೆ ತುತ್ತಾದವರ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಮೃತಪಟ್ಟವರ ಕುಟುಂಬದವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಲಾಗಿದೆ. ಆದರೆ ಚುನಾವಣೆ ಕೇವಲ ಮೂರು ತಿಂಗಳಿದೆ ಎನ್ನುವಾಗ ಬಂದಿರುವವರು ಕೋವಿಡ್ ಸಮಯದಲ್ಲಿ ಏನು ಮಾಡಿದರು ಎಂದು ಪ್ರಶ್ನಿಸಿದರು.
200 ಕೋಟಿ ಆಸ್ತಿ ಘೋಷಿಸಿಕೊಂಡವರು ಕೋವಿಡ್ ಸಮಯದಲ್ಲಿ ಒಬ್ಬರಿಗೆ ಒಂದು ಫುಡ್ ಕಿಟ್ ಕೊಡಲಿಲ್ಲ. ಜನರ ಕಷ್ಟ ಕೇಳಲಿಲ್ಲ. ಅವರದ್ದೇ ಪಕ್ಷದ ಕಾರ್ಯಕರ್ತರ ನೋವಿಗೆ ಸ್ಪಂದಿಸಲಿಲ್ಲ. ಯಶವಂತಪುರದ ಜನತೆ ಬುದ್ಧಿವಂತರಿದ್ದಾರೆ. ಕಣ್ಣೀರಾಕುವವರಿಗೆ ಮರುಳಾಗುವುದಿಲ್ಲ ಎಂದು ಹೇಳಿದರು.
ಜನ ಕಣ್ಣೀರಾಕುತ್ತಿದ್ದಾಗ ಅವರ ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ. ನಾನು ಕಣ್ಣೀರೊರೆಸುವವನು. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಿತ್ಯ ನೂರಾರು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಲಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.