ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಮತ್ತಷ್ಟು ಪ್ರದೇಶಗಳಿಗೆ ವಿಸ್ತಾರಗೊಂಡಿದೆ. ಮಕರ ಸಂಕ್ರಾಂತಿ ದಿನವಾದ ಇಂದು ಯಲಚೇನಹಳ್ಳಿ-ಸಿಲ್ಕ್ ಬೋರ್ಡ್’ವರೆಗಿನ ಮೆಟ್ರೋಸಂಚಾರ ಮಾರ್ಗವನ್ನು ಲೋಕಾರ್ಪಣೆ ಮಾಡಲಾಯಿತು.

ಯಲಚೇನಹಳ್ಳಿ ಮೆಟ್ರೋ ರೈಲು ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಮೆಟ್ರೋ ರೈಲು ನಿಲ್ದಾಣದ ವರೆಗೆ 6 ಕೀ.ಮಿ ದೂರದ ಮೆಟ್ರೋ ರೈಲು ಸಂಚಾರಕ್ಕೆ ಬೆಂಗಳೂರು ಹೊರವಲಯದ ಕನಕಪುರ ರಸ್ತೆಯ ಕೋಣನಕುಂಟೆ ಬಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಅರ್.ಅಶೋಕ, ನಗರಾಭಿವೃದ್ಧಿ ಸಚಿವ ಬಿಎ.ಬಸವರಾಜ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಬಿಡಿಎ ಅಧ್ಯಕ್ಷ ಎಸ್.ಅರ್ ವಿಶ್ವನಾಥ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಸತೀಶ್ ರೆಡ್ಡಿ, ಅರ್.ಕೃಷ್ಣಪ್ಪ ಸೇರಿದಂತೆ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






































































