ಬೆಂಗಳೂರು: ನೊಂದ ಜೀವಿಗಳಿಗಳಿಗೆ ಅಭಯ ನೀಡುವ ‘ಮಾತೃ ಹೃದಯಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ ಮಹಿಳಾ ಆಯೋಗ ಇದೀಗ ಹೊಸತನದ ಹಾದಿಯತ್ತ ಮುಖ ಮಾಡಿದೆ. ನೊಂದು ಬಂದ ಮಹಿಳೆಯರಿಗೆ ಕಾನೂನು ನೆರವಿನ ಮೂಲಕ ನ್ಯಾಯ ನೀಡುವುದಷ್ಟೇ ಅಲ್ಲ, ನೊಂದವರ ಹಸಿವು ನೀಗಿಸುವ ಮೂಲಕ ಮಾನವೀಯ ನಡೆಯನ್ನೂ ಅನುಸರಿಸುತ್ತಿದೆ. ಇಂಥದ್ದೊಂದು ಆತ್ಮೀಯ ಸೇವೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಮುಂದಾಗಿದ್ದಾರೆ.
ದೇಶ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ನ್ಯಾಯ ಬಯಸಿ ಮಹಿಳಾ ಆಯೋಗಕ್ಕೆ ಆಗಮಿಸುವ ನೊಂದವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಗ ಮಾಡಿದೆ. ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರ ಈ ಕ್ರಮ ಇಡೀ ದೇಶದ ಗಮನಸೆಳೆದಿದೆ.
ಇನ್ನು ಮುಂದೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲಿ ದೂರದ ಊರುಗಳಿಂದ ಬರುವ ನೊಂದ ಮತ್ತು ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು ಮತ್ತು ವೃದ್ದ ಅರ್ಜಿದಾರರು ಮಧ್ಯಾಹ್ನದ ಆಹಾರ ವ್ಯವಸ್ಥೆಯಿಲ್ಲದೆ ಪರದಾಡಬಾರದು. ಈ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು ಅವರು ತಿಳಿಸಿದ್ದಾರೆ.
ಮಹಿಳಾ ಆಯೋಗದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನೊಂದವರಿಗೆ ಕಾನೂನು ಮೂಲಕ ನೀಡುವ ನ್ಯಾಯದ ಜೊತೆಗೆ ಮಾನವೀಯತೆಯ ನೆರವೂ ಸಿಗುತ್ತಿದೆ ಎಂದು ಆಯೋಗದ ಕಚೇರಿಗೆ ಭೇಟಿ ನೀಡದವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.