ಬೆಂಗಳೂರು: ಮುದ್ದಹನುಮೇಗೌಡರು ಇಂದು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಸೇರಿದ್ದಾರೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರ ಪರವಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಶಿಸ್ತು. ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ವಿಚಾರವಾಗಿ ರಾಜಣ್ಣ, ವಾಸು ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ನಮ್ಮ ಜತೆ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಮಗೆ ಏನೇ ನೋವಾಗಿದ್ದರು ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಮಹಾತ್ಮಾ ಗಾಂಧಿ ಅವರಿಂದ ನೆಹರೂ ಕುಟುಂಬ ಮಾಡಿರುವ ತ್ಯಾಗದ ಮುಂದೆ ನಮ್ಮ ತ್ಯಾಗ ಗೌಣ. ನೆಹರೂ ಹಾಗೂ ಅವರ ತಂದೆ ತಮ್ಮ ಆಸ್ತಿಪಾಸ್ತಿಗಳನ್ನೆಲ್ಲಾ ದೇಶಕ್ಕಾಗಿ ತ್ಯಾಗ ಮಾಡಿದರು. ಇಂದು ಸೋನಿಯಾ ಗಾಂಧಿ ಅವರಿಗೆ ಒಂದು ಮನೆ ಇಲ್ಲ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಎಲ್ಲಾ ತ್ಯಾಗ ಮಾಡಿದ್ದಾರೆ. ನೀವೆಲ್ಲರೂ ಪಕ್ಷದ ಸದಸ್ಯತ್ವ ನೋಂದಣಿ ಸಮಯದಲ್ಲಿ ಕೊಟ್ಟ 10 ರೂಪಾಯಿ ಶುಲ್ಕದ ಹಣವನ್ನು ಇಂದು ಐಟಿ, ಇಡಿ ಅವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಲ ಎಂದರು.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ತ್ರಿವರ್ಣ ಧ್ವಜವನ್ನು ಕಾಂಗ್ರೆಸಿಗರು ಮಾತ್ರ ಧರಿಸಲು ಸಾಧ್ಯ. ಈ ತ್ರಿವರ್ಣ ಧ್ವಜವನ್ನು ಬಿಜೆಪಿಯಲ್ಲಿ, ಜೆಡಿಎಸ್ ಪಕ್ಷದಲ್ಲಿ ಧರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಒಂದು ಜಾತಿ, ವರ್ಗ ಅಥವಾ ಪಕ್ಷಕ್ಕೆ ಸೀಮಿತವಾಗಿದೆಯೇ? ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ಈ ಕಾರ್ಯಕ್ರಮಗಳ ಮೂಲಕ ಚುನಾವಣೆಗೂ ಮುನ್ನ ಜನರ ಬಳಿ ಹೋಗಲು ನಾವು ನಿಮಗೆ ಶಕ್ತಿ ನೀಡಿದ್ದೇವೆ ಎಂದರು.
ಕಳೆದ 45 ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ನಮ್ಮ ವಿರುದ್ಧ ಅಭ್ಯರ್ಥಿ ಹಾಕಿದ್ದರು. ನಮ್ಮ ಅಭ್ಯರ್ಥಿ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಹಾಗೂ ದಳದ ನಾಯಕರೇ ಈ ಚುನಾವಣೆ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದ್ದರು. ಅವರು ಈಗಲೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದವರು ತಿಳಿಸಿದರು.







































































