‘ಕಾಂತಾರ’ ಸಿನಿಮಾವು ಕನ್ನಡ ಸಿನಿರಂಗಕ್ಕೆ ಹೊಸ ಚೇತರಿಕೆ ತಂದುಕೊಡುತ್ತಿದ್ದಂತೆಯೇ ಸ್ಯಾಂಡಲ್ವುಡ್ ವಲಯದಲ್ಲಿ ಕನಸುಗಳು ಚಿಗುರೊಡೆಯಲಾರಂಭಿಸಿದೆ. ಅದೇ ಹೊತ್ತಿಗೆ ಅನಾವರಣವಾಗಿರುವ ‘ವೃಷ್ಟಿ’ ಪೋಸ್ಟರ್ ಉತ್ಸಾಹಿ ಯುವಕರ ಕನಸುಗಳನ್ನೂ ನೂರ್ಮಡಿಗೊಳಿಸಿದೆ.
ಆಸೆಗಳ ಲೋಕದಲಿ…
ಅರಿಯದೆ ಮೂಡಿದ ಕಥೆ ಇದು..
ಭಾವನೆಗಳ ಸಾಲಿನಲಿ….
ತಿಳಿಯದೆಯೇ ಹರಿದ ವ್ಯಥೆ ಇದು..
‘ವೃಷ್ಟಿ’ ಎಂಬ ಹೊಂಗನಸು ಇದು..
ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸಾಧನಾ ಜಗದೀಶ್ ಶೆಟ್ಟಿ ನಿರ್ಮಾಣದ ಹೊಸ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಕರಾವಳಿಯಲ್ಲಿ ಗಮನಸೆಳೆಯಿತು. ಮಂಗಳೂರಿನ ಪ್ರಕಾಶ್ ನಾಥ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರಕಾಶ್ ನಾಥ ಮಂದಿರದ ಶ್ರೀ ಸುಮಂತ್ರವರು ಪೋಸ್ಟರ್ ಬಿಡುಗಡೆಗೊಳಿಸಿ ಸಿನಿ ಪರ್ವಕ್ಕೆ ಮುನ್ನುಡಿ ಬರೆದರು. ಧಾರ್ಮಿಕ ಮುಖಂಡ ನಾಗರಾಜ್ ಆಚಾರ್ಯ ಸಹಿತ ಹಲವರು ಹಾರೈಸಿದ ಶುಭಾಷಯಗಳು ಈ ಸಿನಿ ತಂಡಕ್ಕೆ ಚೈತನ್ಯ ತುಂಬಿತು.
ಈ ಮೊದಲು ‘ಕನಸು ಮಾರಾಟಕ್ಕಿದೆ’ ಚಲನಚಿತ್ರ ಹಾಗೂ ‘ವನಜಾ’ ವೆಬ್ ಸೀರಿಸ್ ನಿರ್ಮಿಸಿದ ತಂಡವೇ ಈ ‘ವೃಷ್ಟಿ’ಯ ಪ್ರಯತ್ನಕ್ಕಿಳಿದಿದೆ. ನಿಶಿತ್ ಶೆಟ್ಟಿಯವರು ನಿರ್ದೇಶನ, ಸಂತೋಷ್ ಆಚಾರ್ಯ ಗುಂಪಲಾಜೆ ಕ್ಯಾಮರ ಕೈಚಳಕ ಈ ಚಿತ್ರಕ್ಕೆ ಜೀವತುಂಬಿದೆ.ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದು, ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ನಿರ್ವಹಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಯಶವಂತ್ ಬೆಳ್ತಂಗಡಿ, ಸಿಂಚನಾ ಪಿ.ರಾವ್, ವಿನಿಶಾ, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಯುವ ಶೆಟ್ಟಿ, ರಾಕೇಶ್ ಪೂಜಾರಿ, ಅನೀಶ್ ಪೂಜಾರಿ, ಮುಂತಾದವರ ತಾರಾಂಗಣವು ‘ವೃಷ್ಠಿ’ ಯಶಸ್ಸಿನ ಬಗ್ಗೆ ಆಶಾವಾದವನ್ನು ಹೆಚ್ಚಿಸಿದೆ.
ಈ ನಡುವೆ, ‘ವೃಷ್ಠಿ’ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ತಂಡಕ್ಕೆ ಶುಭಾಶಯಗಳ ಮಹಾಮಳೆಯಾಗುತ್ತಿದೆ.




















































