ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರು ಹೈಜಾಕ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು, ಈ ಸಂಬಂಧ ಕಾಂಗ್ರೆಸ್ನಿಂದ ಚುನಾವಣಾ ಆಯೋಗಕ್ಕೆ ಮತ್ತೊಮ್ಮೆ ದೂರು ಸಲ್ಲಿಕೆಯಾಗಿದೆ.
ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಬಿ.ಆರ್ ಪಾಟೀಲ್ ಅವರು ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಚಿಲುಮೆ ಸಂಸ್ಥೆ ಮೂಲಕ ಮತದಾರರ ಪಟ್ಟಿ ಅಕ್ರಮ ಮಾಡಿದ ನಂತರ ಈಗ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಬೇರೆ ರೀತಿಯ ಅಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಇಂದು ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಜ್ಯದ 46ನೆ ವಿಧಾನ ಸಭಾ ಕ್ಷೇತ್ರವಾಗಿರುವ ಆಳಂದದಲ್ಲಿ ಆನ್ ಲೈನ್ ಮೂಲಕ 6670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೇ ಮತದಾರರ ಪಟ್ಟಿಯಿಂದ ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಲಾಗಿದೆ ಎಂದು ಮಾಹಿತಿ ಹಂಚಿಕೊಂಡಿರುವ ಅವರು, ಮತದಾರರ ಗಮನಕ್ಕೆ ಬಾರದೆ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ನಮ್ಮ ಬೂತ್ ಏಜೆಂಟ್ ಗಳು ಪರಿಶೀಲನೆ ಮಾಡಿದಾಗ, ಅರ್ಜಿಯಲ್ಲಿ ತಾನು ಸ್ಥಳಿಯನಲ್ಲ ನನ್ನ ನಿವಾಸ ಬೇರೆ ರಾಜ್ಯಗಳಲ್ಲಿ ಇದೆ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆಮೂಲಕ ಬಹಳ ವ್ಯವಸ್ಥಿತವಾಗಿ ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ತಹಶೀಲ್ದಾರ್ ಹಾಗೂ ಡಿಸಿಗಳಿಗೂ ದೂರುಗಳು ದಾಖಲಾಗಿವೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ ಆಳಂದದಲ್ಲಿ ಒಂದು ಬೂತ್ ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ಚಿಲುಮೆ ಸಂಸ್ಥೆ ಮೂಲಕದ ಅಕ್ರಮ ಬಯಲಿಗೆ ಬಂದ ನಂತರ ಬಿಜೆಪಿ ತಂತ್ರಜ್ಞಾನ ಬಳಸಿ ಈ ಷಡ್ಯಂತ್ರ ಮಾಡುತ್ತಿದೆ? ಅಮಿತ್ ಶಾ ಹಾಗೂ ನಡ್ಡಾ ಅವರು ಸರ್ಕಾರದ ಕೆಲಸ ಪರಿಶೀಲನೆಗಿಂತ ಮತದಾರರ ಹೆಸರು ಕೈಬಿಡುವ ಕೆಲಸ ಪರಿಶೀಲನೆ ಮಾಡಲು ಬರುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಹಾಕಲಾಗಿರುವವರಲ್ಲಿ ಬಹುತೇಕ ಕಾಂಗ್ರೆಸ್ ಮತದಾರರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೇ ಯಾರು ಮತ ಹಾಕುತ್ತಾರೆ ಎಂದು ಬೇರೆ ರಾಜ್ಯದವರಿಗೆ ಮಾಹಿತಿ ನೀಡುವವರು ಯಾರು? ಈ ಮಾಹಿತಿ ಆ ಸ್ಥಳೀಯ ಬೂತ್ ನವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆಯವರಿಂದ ಈ ಕೆಲಸ ಅಸಾಧ್ಯ. ಬಿಜೆಪಿ ಕಾಂಗ್ರೆಸ್ ಮತದಾರರ ಪಟ್ಟಿ ಕಲೆಹಾಕಲು ಕೆಲವರನ್ನು ನೆಮಿಸಿದಂತಿದೆ ಎಂದವರು ಹೇಳಿದರು.
ಬಿಜೆಪಿ ಅವರ ಸಮೀಕ್ಷೆಯಲ್ಲಿ ಅವರಿಗೆ ಸೋಲು ಖಚಿತವಾಗಿದ್ದು ಇದಕ್ಕಾಗಿ ಇವರು ಈಗ ಟಿಪ್ಪು, ರಾಣಿ ಅಬ್ಬಕ್ಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಅಮಿತ್ ಶಾ ಅವರಿಗೆ ರಾಣಿ ಅಬ್ಬಕ್ಕ ಯಾರು ಅವರ ಇತಿಹಾಸವೇನು ಎಂದು ಗೊತ್ತೇ ಇಲ್ಲ. ಬೇಕಾದರೆ ಅವರನ್ನು ಕರೆಸಿ ಅವರ ಇತಿಹಾಸ ಏನು ಎಂದು ಹೇಳಲಿ ಎಂದು ಸವಾಲು ಹಾಕಿದರು.
ಬಿಜೆಪಿಯ ಈ ಷಡ್ಯಂತರದ ವಿರುದ್ಧ ನಾವು ದೂರಿನ ಜತೆ ದಾಖಲೆಗಳನ್ನು ನೀಡಿದ್ದೇವೆ. ಈ ವಿಚಾರ ಸಂಪೂರ್ಣವಾಗಿ ಪರಿಶೀಲನೆ ಆಗುವವರೆಗೂ ಯತಾಸ್ಥಿತಿ ಇರಬೇಕು. 224 ಕ್ಷೇತ್ರಗಳಲ್ಲಿ ಈ ರೀತಿ ಅಕ್ರಮವಾಗಿ ಮತದಾರರ ಹೆಸರನ್ನು ಕೈಬಿಡುವ ಷಡ್ಯಂತ್ರ ನಡೆದಿಲ್ಲ ಎಂಬ ಖಚಿತತೆಯನ್ನು ಆಯೋಗ ನೀಡಬೇಕು. ಅಲ್ಲದೆ ಬಿಜೆಪಿ ಈ ಬಗ್ಗೆ ಉತ್ತರ ನೀಡಬೇಕು ಎಂದವರು ಹೇಳಿದರು.
ಮತದಾರರ ಪಟ್ಟಿ ಅಂತಿಮ ಪರಿಷ್ಕರಣೆ ನಂತರ ಈ ರೀತಿ ಆಗಿದೆ. ಶಿವಾಜಿ ನಗರದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ರಿಜ್ವಾನ್ ಅರ್ಷದ್ ಅವರು ದೂರು ನೀಡಿದ್ದಾರೆ. ಆದರೆ ಇಲ್ಲಿ ಬೇರೆ ಮಾದರಿಯಲ್ಲಿ ಅಕ್ರಮ ಮಾಡಲಾಗಿದೆ. ಇಷ್ಟು ವ್ಯವಸ್ಥಿತವಾಗಿ ಮಾಡುತ್ತಿರುವವರು ಯಾರು? ಎಂಬುದು ಬೆಳಕಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಇವರು ಡಿಜಿಟಲ್ ಇಂಡಿಯಾವನ್ನು ಬೇರೆ ಹಂತಕ್ಕೆ ಹೋಗುತ್ತಿದ್ದಾರೆ. ಅವರ ಮುಖ್ಯಮಂತ್ರಿಯೊಬ್ಬರು ಮೊದಲು ಚೆಕ್ ನಿಂದ್ ಲಂಚ ಪಡೆದು ನಂತರ ಆರ್ಟಿ ಜಿಎಸ್ ಮೂಲಕ ಲಂಚ ಪಡೆದರು, ಈ ಮುಖ್ಯಮಂತ್ರಿ ಬಿಟ್ ಕಾಯಿನ್ ಮೂಲಕ ಅಕ್ರಮ ಮಾಡಿದರು. ಈಗ ಚುನಾವಣಾ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಕ ಅಕ್ರಮ ಮಾಡಲು ಮುಂದಾಗಿದ್ದಾರೆ ಎಂದು ದೂರಿದ ಅವರು, ಇನ್ನು ಮತದಾರರ ಹೆಸರನ್ನು ಕೈಬಿಡುವಂತೆ ಅರ್ಜಿ ಹಾಕಿರುವವರಲ್ಲಿ ಬಹುತೇಕರು ಯುಪಿ ಬಿಹಾರದವರಾಗಿದ್ದಾರೆ. ಬಿಜೆಪಿ ಹೇಳುವ ಯುಪಿ ಮಾದರಿ ಇದೇನಾ? ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ನೀವು ಮತ್ತೆ ಅಧಿಕಾರಕ್ಕೆ ಬರಲ್ಲ. ನೀವು ಅಮಿತ್ ಶಾ, ನಾಡ್ಡಾ ಅವರನ್ನು ಎಷ್ಟು ಸಾರಿ ಕರಿಸಿದರು, ಬಿಜೆಪಿ ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ ಎಂದರು.
ಇದೇ ವೇಳೆ, ತಮ್ಮ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಮನವಿ ಬಂದಿದ್ದು, ಬಹುತೇಕ ಮತದಾರರು ತಾವುಗಳು ಅರ್ಜಿ ಹಾಕಿಲ್ಲ. ಅವರ ಬದಲಿಗೆ ಬೇರೆಯವರು ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಿದ್ದಾರೆ ಎಂದು ಬಿ.ಆರ್. ಪಾಟೀಲ್ ತಿಳಿಸಿದರು.
ಈ ಬಗ್ಗೆ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದೇವೆ. ಈ ಅರ್ಜಿ ಹಾಕಿರುವವರ ದೂರವಾಣಿ ಸಂಖ್ಯೆಯನ್ನು ಕರೆ ಮಾಡಿದರೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ ಬೇರೆ ರಾಜ್ಯ ಹಾಗೂ ಮಂಡ್ಯ ಹಾಗೂ ಇತರ ಜಿಲ್ಲೆಯವರು ಮಾತನಾಡುತ್ತಾರೆ ಎಂದ ಅವರು, ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತಾರದೆ ಇದ್ದಿದ್ದರೆ ಈ ಮತದಾರರ ಹೆಸರು ಪಟ್ಟಿಯಿಂದ ಕೈ ಬಿಡಲಾಗುತ್ತಿತ್ತು. ಮತ ಚಲಾವಣೆ ಮೂಲಭೂತ ಹಕ್ಕು, ಇದನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.