ಕಾರವಾರ: ಮತದಾರರ ಪಟ್ಟಿ ಗೋಲ್‌ಮಾಲ್ ಮಾಡಿರುವ ಬಿಜೆಪಿ ಸರ್ಕಾರ ಪರಿಶಿಷ್ಟರ ಹೆಸರಿಗೂ ಕೊಕ್ ನೀಡಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವ ಬಗ್ಗೆ ಬೇಗನೇ ಖಚಿತಪಡಿಸಿಕೊಳ್ಳಿ ಎಂದು ಅವರು ಜನತೆಗೆ ಸಲಹೆ ಮಾಡಿದ್ದಾರೆ.
ಕುಮಟಾ ಬಳಿ ಗುರುವಾರ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಮತದಾರರ ಮಾಹಿತಿ ಕಳವು ಮಾಡಿ 27 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ದೂರಿದರು. ಯಾವುದೇ ಒಬ್ಬ ವ್ಯಕ್ತಿಯ ಹೆಸರನ್ನು ಮತಪಟ್ಟಿಯಿಂದ ಕೈಬಿಡಬೇಕಾದರೆ ಅವರ ಮನೆಗೆ ಹೋಗಿ ಪರಿಶೀಲಿಸಬೇಕು. ಮತ ಸ್ಥಳಾಂತರ ಮಾಡಬೇಕಾದರೆ ಫಾರಂ 7 ಬೇಕು. ಆದರೆ ಅವರು ತಮ್ಮ ಪಕ್ಷ ಕಾರ್ಯಕರ್ತರನ್ನು ಕೂರಿಸಿಕೊಂಡು ಅವರಿಗೆ ಯಾರು ಬೇಕೋ ಅವರ ಹೆಸರನ್ನು ಸೇರಿಸುವುದು, ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಸಮುದಾಯದ ಮತದಾರರ ಹೆಸರು ತೆಗೆದುಹಾಕುವುದು ಮಾಡಿದ್ದಾರೆ ಎಂದು ದೂರಿದರು.
ಮತದಾರರ ಪಟ್ಟಿ ಅಕ್ರಮ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದ ಡಿಕೆಶಿ, ‘ನಿಮ್ಮ ಬೂತ್ ಗಳಲ್ಲಿ ಎಲ್ಲರೂ ಹೋಗಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಬಗ್ಗೆ ಜಾಗೃತರಾಗಿರಬೇಕು’ ಎಂದು ಜನತೆಗೆ ಸಲಹೆ ಮಾಡಿದರು.
‘ಬಿಜೆಪಿಯವರು ಸೋಲುವ ಭೀತಿಯಲ್ಲಿ ಕಡೇ ಆಟ ಆಡುತ್ತಿದ್ದಾರೆ. ಅವರು ಚಿಲುಮೆ ಸಂಸ್ಥೆಗೆ ಇವಿಎಂ ತಿರುಚಲು ಅವಕಾಶ ಕೊಡುತ್ತಾರಂತೆ. ಮಂತ್ರಿಯೊಬ್ಬ ಆರಂಭದಲ್ಲಿ ನನಗೆ ಅವರು ಗೊತ್ತೇ ಇಲ್ಲ ಎಂದ. ಈಗ ನನಗೂ ಅವರಿಗೂ ಸಂಬಂಧವಿದೆ, ಆದರೆ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದಾನೆ. ಆತ ಬಹಳ ದೊಡ್ಡ ಗಂಡು. ಆ ಬಗ್ಗೆ ನಂತರ ಮಾತನಾಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.





































































