ಬಸವಕಲ್ಯಾಣ : ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಈಶ್ವರಪ್ಪ ಅವರು ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲು ಇದೇ ಕಾರಣ ಎಂದರು.
ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಮಿಷನ್ ಹೊಡೆಯುವ ವಿಷಯದಲ್ಲಿ ವಿಜಯೇಂದ್ರ ಮತ್ತು ಈಶ್ವರಪ್ಪ ನಡುವೆ ಜಗಳವಾಗಿದೆ. ಕಮಿಷನ್ ದಂಧೆ 30-35 ಪರ್ಸೆಂಟ್ ವರೆಗೂ ಹೋಗಿದೆ. ನಾ ಕಾವುಂಗ ನಾ ಕಾನೇದೂಂಗ ಎನ್ನುವ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ಹೇಳಿದರು.
ತರಕಾರಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದೆ. ಬೆಲೆ ಏರಿಕೆಯೇ ಅಚ್ಛೇ ದಿನ ಆಗಿದೆ. ಬೆಲೆ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ಸೋತಿದ್ದಾರೆ. ರೈತರಿಗೆ ಸ್ಪಂದಿಸುವಲ್ಲಿಯೂ ಅವರು ವಿಫಲರಾಗಿದ್ದಾರೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿಯವರ ಸುಳ್ಳು ಕೇಳಿ ಕೇಳಿ ಜನರಿಗೆ ಬೇಸರ ಬಂದಿದೆ. ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷ ಕಳೆದಿದೆ. ಅವರ ಆಡಳಿತ ನೋಡಿದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಈ ಮಟ್ಟದಲ್ಲಿ ದಿವಾಳಿ ಆಗಿರಲಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.