ವಿಜಯಪುರ: ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘ-ಸಂಸ್ಥೆಗಳು ಹಾಗೂ ಸಹಕಾರಿಗಳಿಗೆ ರಾಷ್ಟ್ರದ ಪ್ರಥಮ ಕೃಷಿ ಪತ್ತಿನ ಸಂಘದ ಸಂಸ್ಥಾಪಕರಾದ ಗದಗ ಜಿಲ್ಲೆಯವರಾದ ಶಿದ್ದನಗೌಡ ಸಂಣರಾಮನಗೌಡ ಪಾಟೀಲ್ ಅವರ ಹೆಸರಲ್ಲಿ 10 ಮಂದಿಗೆ ರಾಜ್ಯ ಪ್ರಶಸ್ತಿಯನ್ನು ಮುಂದಿನ ವರ್ಷದಿಂದ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಘೋಷಿಸಿದ್ದಾರೆ.
ವಿಜಯಪುರದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು ಸಹಕಾರ ರಂಗದಲ್ಲಿ ಶಿದ್ದನಗೌಡ ಸಂಣರಾಮನಗೌಡ ಪಾಟೀಲ್ ಅವರ ಶ್ರಮ ಬಹಳ ದೊಡ್ಡದಿದೆ. ಇಂದು ಅವರು ಹಾಕಿಕೊಟ್ಟ ಬುನಾದಿ ಮೇಲೆ ನಾವೆಲ್ಲ ಮುಂದುವರಿದುಕೊಂಡು ಹೋಗುತ್ತಿದ್ದೇವೆ. ಯುವಜನರಿಗೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.
ಸಹಕಾರ ರತ್ನ ಪ್ರಶಸ್ತಿಯನ್ನು ನೀಡುತ್ತಿದ್ದೇವೆಯೋ ಹಾಗೆಯೇ ಶಿದ್ದನಗೌಡ ಸಂಣರಾಮನಗೌಡ ಪಾಟೀಲ್ ಪ್ರಶಸ್ತಿಯನ್ನು ಮುಂದಿನ ವರ್ಷದಿಂದ ಸಹಕಾರಿ ರಂಗದಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರಿಗೆ ಕೊಡಲಾಗುತ್ತದೆ. ಈ ಬಗ್ಗೆ ಈಗಾಗಲೇ ತೀರ್ಮಾನವನ್ನು ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.