ಬೆಂಗಳೂರು: ವಿಧಾನಪರಿಷತ್‍ನ ನೂತನ ಸಭಾಪತಿಯಾಗಿ ಆಯ್ಕೆಯಾಗಿರುವ ಸಜ್ಜನ ರಾಜಕಾರಣಿ ಹಾಗೂ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರಿಗೆ ಅಭಿನಂನೆಗಳ ಮಹಾಪೂರವೇ ಹರಿದುಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿಯವರು ಹೊರಟ್ಟಿಯವರನ್ನು ಅಭಿನಂದಿಸಿದ್ದಾರೆ.
ಸತತ ಏಳು ಬಾರಿ ಗೆದ್ದು ರಾಷ್ಟ್ರದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿ ದೇಶಕ್ಕೆ ಮಾದರಿ ಮೇಲ್ಮನೆ ಎನಿಸಿದ ವಿಧಾನಪರಿಷತ್‍ನ ಸಭಾಪತಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಹಿರಿತನಕ್ಕೆ ಸಂದ ಗೌರವವೆಂದು ನಿರಾಣಿ ಹೇಳಿದ್ದಾರೆ.
ಹಿರಿಯರ ಸದನವೆಂದೇ ಹೇಳಲಾಗುವ ಮೆಲ್ಮನೆಯಲ್ಲಿ ಅರ್ಥಪೂರ್ಣ ಚರ್ಚೆಯಾಗಿ ಸರ್ಕಾರಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವಂತಾಗಲಿದೆ. ಅದರಲ್ಲೂ ಹಿರಿಯರಾದ ಬಸವರಾಜ್ ಹೊರಟ್ಟಿ ಅವರು ಸಭಾಪತಿಯಾಗಿರುವುದರಿಂದ ಸದನದ ಘನತೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸಚಿವ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.
ಬಸವರಾಜ್ ಹೊರಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲ ರಾಜಕೀಯ ಪಕ್ಷಗಳಿಗೂ ಅಭಿನಂದನೆಗಳು. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಅವರ ನೇತೃತ್ವದಲ್ಲಿ ವಿಧಾನಪರಿಷತ್ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ನಿರಾಣಿಯವರು ಆಶಿಸಿದ್ದಾರೆ.