ಮೈಸೂರು: ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಬಹುಮತದ ಅಗತ್ಯವಿದೆ. ಮತಾಂತರ ಬಿಲ್ ವಿಧಾನಪರಿಷತ್ ನಲ್ಲಿ ಆಗಲಿಲ್ಲ. ಹೀಗೆ ಹಲವು ಬಿಲ್ ಗಳು ಪಾಸ್ ಆಗಲು ವಿಧಾನಪರಿಷತ್ ನಲ್ಲಿ ಬಹುಮತ ಬೇಕಿದೆ. ನಾಲ್ಕಕ್ಕೆ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ-2022 ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವರು, ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ಕೆಆರ್ ಆಸ್ಪತ್ರೆ ದುರಸ್ತಿಗೆ 90 ಕೋಟಿ, ಮೈಸೂರು ಏರ್ ಪೋರ್ಟ್ ಗೆ 300 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಈ ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ, ಮಾತನಾಡುವ ಚಾಕಚಕ್ಯತೆ ರವಿಶಂಕರ್ ಅವರಿಗಿದೆ. ವಿಧಾನಪರಿಷತ್ ಗಂಧಗಾಳಿ ಗೊತ್ತಿಲ್ಲದವರು ಆಯ್ಕೆ ಆಯ್ಕೆಯಾಗುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿ ಗೆದ್ದರೆ ವ್ಯರ್ಥ. ಈ ಕುರಿತು ಪದವೀಧರರು ಚಿಂತನೆ ಮಾಡಬೇಕು ಎಂದರು.
ಕಳೆದ ಎರಡು ವರ್ಷದಿಂದ ನೇಮಕಾತಿ ಆಗಲಿಲ್ಲ. ಆದರೀಗ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ನೇಮಕಾತಿ ಆರಂಭಿಸಲಾಗಿದೆ. ನಿರುದ್ಯೋಗಿಗಳಿಗೆ ಅನುಕೂಲಕರವಾದ ತೀರ್ಮಾನವನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.
ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮೂಲಕ 26 ಲಕ್ಷ ರೈತರಿಗೆ ನಬಾರ್ಡ್ ನಿಂದ ನೇರ ಅನುದಾನ ಸಿಗಲಿದೆ. ಹಾಲು ಪೂರೈಸುವ 9 ಲಕ್ಷ ಮಹಿಳೆಯರಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗಲಿದೆ ಎಂದರು.
ಈ ವರ್ಷ 33 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 6350 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಬೇರೆಯವರು ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು ಅಷ್ಟೇ. ಆದರೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಬಳಿಕ ಸಾಲಮನ್ನಾ ಹಣ ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಹಣ ಬಿಡುಗಡೆ ಮಾಡಿದ್ದು 31 ಸಾವಿರ ರೈತರ ಸಾಲಮನ್ನಾ ಮಾತ್ರ ಬಾಕಿ ಉಳಿದಿದೆ ಎಂದರು.
30 ವರ್ಷಗಳಿಂದ ಪಕ್ಷದ ಸಂಘಟನೆ, ಕಾರ್ಯಕ್ರಮಗಳು, ಕಾರ್ಯಕರ್ತರ ಮೆಲಿನ ವಿಶ್ವಾಸ ಗಮನಿಸಿ ಸಾಮಾನ್ಯ ಕಾರ್ಯಕರ್ತ ಮೈ.ವಿ.ರವಿಶಂಕರ್ ಅವರನ್ನು ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
6 ತಿಂಗಳಿಂದ ಪದವೀಧರರ ನೋಂದಣಿ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ 60 ಸಾವಿರ ಪದವೀಧರರ ನೋಂದಣಿಯಾಗಿದೆ. ಇದರಲ್ಲಿ ಈಗಾಗಲೇ 30 ಸಾವಿರ ಪದವೀಧರರನ್ನು ವೈಯಕ್ತಿಕವಾಗಿ ಭೇಟಿ ಮಾಡಲಾಗಿದೆ. ಉಳಿದವರನ್ನು ಮುಂದಿನ ದಿನಗಳಲ್ಲಿ ಭೇಟಿ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಮಹೇಶ್, ಪ್ರೀತಮ್ ಗೌಡ, ಮೈಸೂರು ನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರವಿಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳ ಸೋಮಶೇಖರ್, ಹಲವು ನಿಗಮ, ಮಂಡಳಿಗಳ ಅಧ್ಯಕ್ಷರು, ಮುಖಂಡರು ಉಪಸ್ಥಿತರಿದ್ದರು.