ಉಡುಪಿ: ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಕರಾವಳಿಯ ಭೂತಾರಾಧನೆ ಬಗ್ಗೆ ಚರ್ಚೆ ಸಾಗಿದೆ. ಕರಾವಳಿಯ ಭೂತಾರಾಧನೆ, ಕೋಲ ಮತ್ತಿತ್ಯಾದಿ ಆಲಾರಾಧನಾ ವಿಚಾರಗಳೂ ಕುತೂಹಲದ ಕೇಂದ್ರಬಿಂದುವಾಗಿವೆ. ಅದರಲ್ಲೂ ದೈವಾರಾಧನೆಯಲ್ಲಿ ಭೂತ ಕೋಲದ ಪಾತ್ರಧಾರಿಗಳಾಗಿರುವ ದೈವನರ್ತಕ ಮಾಡುವವರ ಆರ್ಥಿಕ ಸದೃಢತೆಗೆ ರಾಜ್ಯ ಸರ್ಕಾರವೂ ಮುಂದಾಗಿದೆ. ಅದಾಗಲೇ ತುಳುನಾಡಿನ ಭೂತಾರಾಧನೆನ್ನು ಮೂಢನಂಬಿಕೆ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ನೀಡಿರುವ ಹೇಳಿಕೆ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ.
ಸಾಹಿತಿ, ಚಿಂತಕಿ, ಬಿ.ಟಿ ಲಲಿತಾ ನಾಯಕ್ ಅವರ ಹೇಳಿಕೆ ವಿಚಾರ ಕರಾವಳಿ ಜನರನ್ನು ರೊಚ್ಚಿಗೆಬ್ಬಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಹೇಳಿಕೆ ವಿರುದ್ದ ಸಿಡಿದೆದ್ದಿರುವ ಹಿಂದೂ ಸಂಘಟನೆಗಳು ಬಿ.ಟಿ.ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಠಾಣೆಗೆ ದೂರು ನೀಡಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡರು ದೂರು ನೀಡಿದ್ದು, ತುಳುನಾಡಿನ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯಾಗಿದೆ ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹೀಯಾಳಿಸಿದ್ದಾರೆ. ದೈವರಾದನೆ ಬಗ್ಗೆ ಬಹಳ ಕೀಳಾಗಿ ಮಾತನಾಡಿ ನಮ್ಮ ಮನಸ್ಸಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಅವರು ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.
ಲಲಿತಾ ನಾಯಕ್ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ. ಒಂದು ವರ್ಗ, ಸಮುದಾಯದ ಅವಹೇಳನವಾದಾಗ ಕೈಗೊಳ್ಳುವ ಕ್ರಮವನ್ನು ಜಾರಿಯಾಗೊಳಿಸಿ ಎಂದು ಪೊಲೀಸರಿಗೆ ಮನವಿ ಮಾಡಿರುವುದಾಗಿ ದೂರುದಾರರು ತಿಳಿಸಿದ್ದಾರೆ.