ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಆಕಾಂಕ್ಷಿಗಳ ಅತೃಪ್ತಿ ಸವಾಲಾಗಿ ಪರಿಣಮಿಸಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಸಂಯುಕ್ತಾ ಪಾಟೀಲ್ ಅವರಿಗೆ ಟಿಕೆಟ್ ಪ್ರಕಟಿಸಿದೆ. ಇದರಿಂದ ವೀಣಾ ಹಾಗೂ ಬೆಂಬಲಿಗರು ಕುಪಿತರಾಗಿದ್ದಾರೆ.
ಇದೇ ವೇಳೆ, ತಮಗೆ ಟಿಕೆಟ್ ನಿರಾಕರಿಸಿದ್ದದಿಂದ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ ಪಕ್ಷೇತರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಸೋಮವಾರ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಅವರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ವೀಣಾ ಅವರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಭ್ಯರ್ಥಿಯನ್ನು ಬದಲಾಯಿಸದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಕಾಶಪ್ಪನವರ್, ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಜಾರಿಗೆ ಮಾಡಿ, ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರ ವಿರುದ್ದ ಸಿಟ್ಟು ಹೊರಹಾಕಿದರು. ಅಭ್ಯರ್ಥಿ ಬದಲಾವಣೆ ಆಗುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಹೈಕಮಾಂಡ್ ಸ್ಪಂಧಿಸದಿದ್ದಲ್ಲಿ ರಾಜ್ಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಹಾಗೂ ಇತರೆ ಹುದ್ದೆಗಳಿಗೆ ರಾಜೀನಾಮೆ ನೀಡಿ, ಬೆಂಬಲಿಗರ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.






































































