ದಾವಣಗೆರೆ: ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ 2021ರ ಫೆಬ್ರವರಿ ತಿಂಗಳ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ನೇಮಕವಾಗಿದ್ದಾರೆ.
ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿ ಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸರ್ವಾನುಮತದಿಂದ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಸಮಾಜ ಕಲ್ಯಾಣ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರು, ಅಧ್ಯಕ್ಷ ಸ್ಥಾನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಅವರ ಹೆಸರನ್ನು ಸೂಚಿಸಿದರು ಮತ್ತು ಶಾಸಕರಾದ ರಘು ಮೂರ್ತಿ, ಸೋಮಲಿಂಗಪ್ಪ, ನಾಗೇಂದ್ರ, ಗಣೇಶ್, ಬಸವನಗೌಡ ದದ್ದಲ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಗಂಗಾಧರ ನಾಯಕ್ ಮೊದಲಾದವರು ರಮೇಶ್ ಜಾರಕಿಹೊಳಿ ಅವರ ನೇಮಕವನ್ನು ಅನುಮೋದಿಸಿದರು.
ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಈ ಸಭೆ ನಮ್ಮ ಜನಾಂಗದ ಒಗ್ಗಟ್ಟಿನ ಸೂಚಕವಾಗಿದ್ದು, ಮೀಸಲಾತಿ ಹೆಚ್ಚಳ ಸಂಬಂಧಿಸಿ ಸರ್ಕಾರದ ಮೇಲೆ ಒತ್ತಡ ಹೇರಿ, ವಾಲ್ಮೀಕಿ ಜಾತ್ರೆ ವೇಳೆಗೆ ಸಮುದಾಯಕ್ಕೆ ಸಿಹಿ ಸುದ್ದಿ ಕೊಡುವುದಾಗಿ ತಿಳಿಸಿದರು.
ಫೆಬ್ರವರಿ 8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವೇ ವ್ಯವಸ್ಥೆಗಳನ್ನು ಮಾಡಬೇಕು. 3ನೇ ವರ್ಷದ ಜಾತ್ರಾ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಸಭೆಯಲ್ಲಿ ತಿಳಿಸಿದರು.
ವಾಲ್ಮೀಕಿ ಸಮುದಾಯದ ಶಾಸಕರು, ಸಂಸತ್ ಸದಸ್ಯರು ಮತ್ತು ಇತರೆ ಜನಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.