ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಮಗದ ಹಗರಣ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವಂತೆಯೇ ಮುಜುಗರದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ಅವರು ಹರಸಾಹಸ ನಡೆಸುತ್ತಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರರ ರಾಜೀನಾಮೆಗೆ ಸೂಚಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಮಗದ ಅಧಿಕಾರಿ ಸಾವಿನ ಪ್ರಕರಣ ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಲಿಗೆ ಸವಾಲನ್ನು ತಂದೊಡ್ಡಿದೆ. ಈ ಸಾವಿನ ಸುದ್ದಿಯ ಜೊತೆಯಲ್ಲೇ ಭ್ರಷ್ಟಾಚಾರ ಆರೋಪ ಪ್ರತಿಧ್ವನಿಸಿದ್ದು, ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಪಟ್ಟುಹಿಡಿದಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಜುಗರದಿಂದ ಪಾರಾಗಲು ಹರಸಾಹಸ ಪಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಗುರುವಾರ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕೇ ಎಂಬ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಸಾವಿನ ಪ್ರಕರಣದಲ್ಲಿ ಆಗಿನ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿರುವ ನಾವು, ಇದೀಗ ಅಂಥದ್ದೇ ಪ್ರಕರಣ ನಡೆದಿರುವಾಗ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಮುಖಭಂಗವಾಗುವ ಸಾಧ್ಯತೆಗಳೇ ಹೆಚ್ಚಿವೆ ಎಂಬ ಬಗ್ಗೆ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ರಾಜೀನಾಮೆ ಬಗ್ಗೆ ಸಚಿವ ಬಿ ನಾಗೇಂದ್ರ ಅವರಿಗೆ ಸಿಎಂ ಸಿದ್ದರಾಮಯ್ಯ ಸೀಚನೆ ನೀಡಿದ್ದಾರೆನ್ನಲಾಗಿದೆ.























































