ದೆಹಲಿ: ಯೋಗಿ ಅಧಿಪತ್ಯದ ನಾಡು ಉತ್ತರಪ್ರದೇಶದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಎಸ್ಪಿ ಅಧಿನಾಯಕ ಮುಲಾಯಾಂ ಸಿಂಗ್ ಸೊಸೆ ಅಪರ್ಣ ಯಾದವ್ ಅವರನ್ನು ಬಿಜೆಪಿಗೆ ಸೆಳೆದು ಪ್ರತಿಪಕ್ಷಗಳ ರಣವ್ಯೂಹ ಬೇಧಿಸಲು ಮಹತ್ವದ ಸೂತ್ರ ಬರೆದ ಶೋಭಾ ಕರಂದ್ಲಾಜೆ, ಇದೀಗ ಮತ್ತೊಬ್ಬ ನಾಯಕನನ್ನು ಕಮಲ ಪಕ್ಷಕ್ಕೆ ಕರೆತಂದಿದ್ದಾರೆ.
ದೆಹಲಿಯಲ್ಲಿಂದು ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ, ಎಸ್ಪಿ ಶಾಸಕ ಸುಭಾಷ್ ರಾಯ್ ಅವರು ಸಚಿವೆ ಶೋಭಾ ಕರಂದ್ಲಾಜೆ ಹಾಗೂ ನಾಯಕರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸಮಾಜವಾದಿ ಪಕ್ಷದ ನಾಯಕ, ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ ಪುರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಭಾಷ್ ರಾಯ್ ಅವರು ಹಿರಿಯ ಮುಖಂಡರ ಸನ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಉತ್ತರ ಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವಾತಂತ್ರದೇವ್ ಸಿಂಗ್, ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅವರು ಸುಭಾಷ್ ರಾಯ್ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಗಳ ಜನಪರ ಯೋಜನೆ ಮತ್ತು ನಿಲುವುಗಳಿಂದ ಪ್ರಭಾವಿತರಾಗಿ ಸುಭಾಷ್ ರಾಯ್ ಅವರು ಸಮಾಜವಾದಿ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉತ್ತರ ಪ್ರದೇಶದ ಅವಧ್ ಕ್ಷೇತ್ರದ ಚುನಾವಣಾ ಸಹ ಪ್ರಭಾರಿ, ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸುಭಾಷ್ ರಾಯ್ ಅವರ ಬಿಜೆಪಿ ಸೇರ್ಪಡೆಯು, ಅವಧ್ ಕ್ಷೇತ್ರದ ಅಂಬೇಡ್ಕರ ನಗರ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಶೋಭಾ ಕರಾಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.