ದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರಾಷ್ಟ್ರೀಯ ಸ್ವಾಸ್ಥ್ಯ ಸ್ವಯಂಸೇವಕ ಅಭಿಯಾನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಮಲ ಪಕ್ಷದ ದಿಗ್ಗಜ ನಾಯಕರು ಇದರಲ್ಲಿ ಭಾಗಿಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಕುತೂಹಲದ ಕೇಂದ್ರಬಿಂದುವಾದರು.
ದೇಶಾದ್ಯಂತ ಸ್ವಾಸ್ಥ್ಯ ಸ್ವಯಂಸೇವಾ ಅಭಿಯಾನದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆದಿದ್ದು, ಕೋವಿಡ್ ನಿಯಂತ್ರಣದಲ್ಲಿ ಮುಂಚೂಣಿ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಈ ಆಚರಣೆಗೆ ವಿಶೇಷತೆಯ ಸ್ಪರ್ಶ ಸಿಕ್ಕಿದೆ. ರಾಷ್ಟ್ರೀಯ ಮಟ್ಟದಲ್ಲಿ ಯುವ ನಾಯಕನಾಗಿ ಬೆಳೆಯುತ್ತಿರುವ ಸಿ.ಟಿ.ರವಿ ಪಾಲ್ಗೊಳ್ಳುವಂತೆ ಸಿಎಂ ಯೋಗಿ ಅಪೇಕ್ಷೆ ಪಟ್ಟಿರುವುದೇ ಅಚ್ಚರಿಯ ಸಂಗತಿ.
ಮಂಗಳವಾರ ಬೆಳಿಗ್ಗೆ ಸ್ವಾಸ್ಥ್ಯ ಸ್ವಯಂಸೇವಾ ಅಭಿಯಾನದ ಕಾರ್ಯಕ್ರಮಕ್ಕೆ ಆಗಮಿಸಿದ ಸಿ.ಟಿ.ರವಿ ಅವರನ್ನು ಲಖ್ನೋದಲ್ಲಿನ ತಮ್ಮ ನಿವಾಸಕ್ಕೆ ಬರಮಾಡಿಕೊಂಡ ಮಹಾಂತ ಯೋಗಿ ಆದಿತ್ಯನಾಥ್ ಅವರು ಕೈಂಕರ್ಯ ರೂಪದಲ್ಲಿ ಬರಮಾಡಿಕೊಂಡರು. ಆತಿಥ್ಯ, ಸತ್ಕಾರವನ್ನು ಕೂಡ ಯೋಗಿಯವರು ತಾವೇ ನೆರವೇರಿಸಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಪುಳಕಗೊಳಿಸಿದರು. ಸಿ.ಟಿ. ರವಿ ಅವರಿಗೆ ಶಾಲು ಹೊದಿಸಿ, ತುಳಸಿ ಮಾಲೆ ಹಾಕಿ ಗೌರವಿಸಿದ ಸಿಎಂ ಯೋಗಿ, ಬೆಳ್ಳಿಯ ವಿಗ್ರಹ, ಸ್ಮರಣಿಕೆಗಳನ್ನೂ ನೀಡಿ ಆತ್ಮೀಯವಾಗಿ ಅಭಿನಂದಿಸಿದರು. ಗೋರಕ್‌ಪುರ್ ಮಠ ಮತ್ತು ಶ್ರೀರಾಮ ಮಂದಿರದ ಪ್ರಸಾದ ನೀಡಿ ಆಶೀರ್ವದಿಸಿದರು.
ಈ ವೇಳೆ ಮಾತನಾಡಿದ ಯೋಗಿ ಆದತ್ಯನಾಧ್, ಸಿ.ಟಿ.ರವಿ ಅವರು ತಮ್ಮ ನಾಥ ಪಂಥವನ್ನು ಗೌರವಿಸುವ ನಾಯಕ. ಹಾಗಾಗಿ ನಮಗೆ ಅವರ ಬಗ್ಗೆ ಅಭಿಮಾನವಿದೆ ಎಂದರು. ಆದಿಚುಂಚನಗಿರಿ ಶ್ರೀಗಳ ಬಗ್ಗೆಯೂ ಗುಣಗಾನ ಮಾಡಿದ ಯೋಗಿ, ಕರ್ನಾಟಕದ ಬಗೆಗಿನ ಅಭಿಮಾನ ಕುರಿತಂತೆಯೂ ಮನಬಿಚ್ಚಿ ಮಾತನಾಡಿದರು.
ಕೋವಿಡ್ ವಿಚಾರದಲ್ಲಿ ಮುಂಚೂಣಿ..
ಉತ್ತರ ಪ್ರದೇಶದಲ್ಲಿ ಸೋಂಕು ಕಡಿಮೆ ಪ್ರಮಾಣದಲ್ಲಿದೆ. ಪ್ರತೀದಿನ 5 ಲಕ್ಷ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪ್ರತೀ ಗ್ರಾಮದಲ್ಲಿ ವಿಶೇಷ ಶಿಬಿರ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಗುತ್ತಿದೆ. ಅತ್ಯಂತ ಸಮರ್ಥ ನಿರ್ವಹಣೆ ಮೂಲಕ ಕೋವಿಡ್ ಸೋಂಕಿನ ಅಬ್ಬರಕ್ಕೆ ಯೋಗಿ ಸರ್ಕಾರ ಅಂಕುಶ ಹಾಕಿದೆ. ಈ ಅಚ್ಚರಿಯ ಸಂಗತಿಯನ್ನು ಸಿಎಂ ಯೋಗಿ ಮನನ ಮಾಡಿದಾಗ ಅಲ್ಲಿದ್ದ ನಾಯಕರು ನಿಬ್ಬೆರಗಾದರು.
ಸಿ.ಟಿ.ರವಿ ಜೊತೆಗೆ ಉತ್ತರಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.