ಬೆಂಗಳೂರು: ಮುಖ್ಯಮಂತ್ರಿ ಬದಲಾಗಿದ್ದೇ ತಡ, ಹಲವರ ಮಂತ್ರಿಗಿರಿ ಕಳಚಿದೆ. ಸಚಿವ ಸ್ಥಾನ ವಂಚಿತ ನಾಯಕರ ಅಸಮಾಧಾನವೇ ಬಿಜೆಪಿ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
ಬೊಮ್ಮಾಯಿ ಸಂಪುಟದ ಚೊಚ್ಚಲ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಲಾಗುತ್ತದೆ ಎಂದು ಹಿರಿಯರು ಅಂದುಕೊಂಡಿದ್ದರು. ಆದರೆ ನಿರೀಕ್ಷಿಸಿದಂತೆ ಆಗಿಲ್ಲ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ಮಾಸ್ಟರ್ ಮೈಂಡ್ ಯೋಗೇಶ್ವರ್ ಅವರಂತೂ ತಾವು ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರು ಕೂಡಾ ಅತೃಪ್ತಿ ಹೊಂದಿದ್ದಾರೆ. ಜಾರಕಿಹೊಳಿ ಕುಟುಂಬವಂತೂ ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲವಾಗಿದೆ. ಮುಂಬೈ ಮಿತ್ರ ಬಳಗದಲ್ಲಿದ್ದ ಶಂಕರ್ ಕೂಡಾ ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ.
ಮುಂದೇನು..?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ತಮ್ಮದೇ ಪ್ರಮುಖ ಪಾತ್ರ ಎನ್ನುತ್ತಿರುವ ಸಿ.ಪಿ.ಯೋಗೇಶ್ವರ್ ಅವರು ಇದೀಗ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಮಂತ್ರಿ ಮಾಡದ ಬಗ್ಗೆ ಅಸಮಾಧಾನಗೊಂಡಿರುವ ಯೋಗೇಶ್ವರ್ ದೆಹಲಿಯಲ್ಲಿ ಕಾರ್ಯತಂತ್ರ ನಡೆಸುತ್ತಿದ್ದಾರೆ. ಇವರಿಗೆ ಸಚಿವ ಸ್ಥಾನ ವಂಚಿತ ಶಂಕರ್ ಕೂಡಾ ಸಾಥ್ ನೀಡಿದ್ದಾರೆ.
ಇನ್ನೊಂದೆಡೆ, ಜಾರಕಿಹೊಳಿ ಬ್ರದರ್ಸ್ ಕೂಡಾ ಅತೃಪ್ತಿಯ ವಿಚಾರವನ್ನು ಬಹಿರಂಗಪಡಿಸಿದ್ದು ಮುಂದೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸುಳಿವನ್ನು ನೀಡಿದ್ದಾರೆ. ‘ಕಳೆದೆರಡು ದಶಕದಲ್ಲಿ ಸಚಿವ ಸ್ಥಾನ ಹೊಂದಿದ್ದ ನಮ್ಮ ಕುಟುಂಬಕ್ಕೆ ಈ ಬಾರಿ ಅವಕಾಶ ಸಿಕ್ಕಿಲ್ಲ’ ಎಂಬ ಕೊರಗು ಜಾರಕಿಹೊಳಿ ಬ್ರದರ್ ಬಾಲಚಂದ್ರ ಅವರದ್ದು.
ಈ ನಾಯಕರು ಈ ವರೆಗೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದರು. ಇದೀಗ ತಮಗೆ ಸಚಿವ ಸ್ಥಾನ ಸಿಗದಿರಲು ಬಿಎಸ್‌ವೈ ಅವರೇ ಕಾರಣ ಎಂದು ಸಿಟ್ಟಾಗಿರುವ ಈ ನಾಯಕರು ಪರ್ಯಾಯ ಕಸರತ್ತಿನಲ್ಲಿ ತೊಡಗಿದ್ದಾರೆ. ಈ ಕಾರ್ಯತಂತ್ರ ಬಿಎಸ್‌ವೈ ಬಣಕ್ಕೆ ಸವಾಲಾಗಿ ಪರಿಗಣಿಸಬಹುದು ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.