ನವದೆಹಲಿ: ಕೇಂದ್ರ ಸರ್ಕಾರದ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ ಎಂದು ಪ್ರಕಟಿಸಿದ್ದಾರೆ.
7 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಲಭ್ಯತೆ ಮುಂದುವರೆದಿದೆ. ಹೊಸ ತೆರಿಗೆ ಪದ್ಧತಿಯನ್ನೂ ಮುಂದುವರೆಸಲಾಗಿದೆ. ಆದಾಯ ತೆರಿಗೆ ವಿನಾಯಿತಿಯಷ್ಟೇ ಅಲ್ಲದೇ, ಆಮದು ಸುಂಕ ಸೇರಿದಂತೆ ಇತರ ತೆರಿಗೆಗಳನ್ನೂ ಉಳಿಸಿಕೊಳ್ಳಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಆದಾಯ ತೆರಿಗೆ ದರಗಳು ಈಗಾಗಲೇ ಕಡಿಮೆಯಾಗಿದ್ದು, ಪ್ರತಿ ವರ್ಷಕ್ಕೆ 2.4 ಲಕ್ಷ ರೂ.ನಿಂದ 7.5 ಲಕ್ಷ ರೂ.ಗೆ ಪ್ರಮಾಣಿತ ಕಡಿತವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ತೆರಿಗೆ ಮರುಪಾವತಿ ಸರಾಸರಿ ಪ್ರಕ್ರಿಯೆ ಸಮಯವನ್ನು 93 ದಿನಗಳಿಂದ ಈ ವರ್ಷ ಕೇವಲ 10 ದಿನಗಳಿಗೆ ಇಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ತೆರಿಗೆ ಮರುಪಾವತಿಯನ್ನು ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ ಎಂದ ಅವರು ಸರಾಸರಿ ಮಾಸಿಕ ಜಿಎಸ್‌ಟಿ ಕೂಡ ದ್ವಿಗುಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.




























































