ಮಂಗಳೂರು: ಹಳೆಯ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಎಸ್‌ಪಿ ಜಯಂತ್ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ವಾರಂಟ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ಅಂದಿನ ಇನ್‌ಸ್ಪೆಕ್ಟರ್ ಜಯಂತ್ ಶೆಟ್ಟಿ ಮತ್ತು ಎಸ್‌ಐ ಶಿವಪ್ರಕಾಶ್ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕಬೀರ್ ಉಳ್ಳಾಲ್ ಎಂಬುವರು ವಕೀಲರಾದ ಖಾಝಿ ಮುಖಾಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ವಿಚಾರಾಧೀನ ನ್ಯಾಯಾಲಯ, ಜಯಂತ್ ಶೆಟ್ಟಿ ಹಾಗೂ ಶಿವಪ್ರಕಾಶ್‌ಗೆ ನೋಟಿಸ್ ಜಾರಿಗೊಳಿಸಿತ್ತು.
ನ್ಯಾಯಾಲಯದ ಆದೇಶದ ವಿರುದ್ಧ ಈ ಇಬ್ಬರು ಪೊಲೀಸ್ ಅಧಿಕಾರಗಳು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಕಬೀರ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಪ್ರಕರಣವನ್ನು ವಿಚಾರಣೆ ನಡೆಸಿ, ಮರು ತನಿಖೆ ನಡೆಸುವಂತೆ ಆದೇಶಿಸಿ, ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆ ಪ್ರಕಾರ ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಜಯಂತ್ ಶೆಟ್ಟಿಗೆ ಯಾವುದೇ ನೋಟಿಸ್ ಸಿಕ್ಕಿರಲಿಲ್ಲ.
ಈ ಮಧ್ಯೆ ನ್ಯಾಯಾಲಯ ಜೂನ್.20ರಂದು ಜಯಂತ್ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರ ಮೂಲಕ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಅನಿರೀಕ್ಷಿತ ಬೆಳವಣಿಗೆಯ ಬಗ್ಗೆ ಗಲಿಬಿಲಿಗೊಂಡ ಜಯಂತ್ ಶೆಟ್ಟಿ ತಮ್ಮ ವಕೀಲ ಪದ್ಮರಾಜ್ ಆರ್ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ನನಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೆಕ್ಷನ್ 197 ಸಿಆರ್‌ಪಿಸಿ ಹಾಗು 170 ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆದಿಲ್ಲ. ಆದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆಮಾಡಿದರು. ಈ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಇಡೀ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಜಯಂತ್ ಶೆಟ್ಟಿ ಪರ ವಕೀಲರಾದ ಪದ್ಮರಾಜ್ ಆರ್. ಮಾಹಿತಿ ನೀಡಿದ್ದಾರೆ.
ಯಾರಿವರು ಜಯಂತ್ ಶೆಟ್ಟಿ..?
ಕರಾವಳಿ ಮೂಲದ ಜಯಂತ್ ಶೆಟ್ಟಿ ರಾಜ್ಯ ಪೊಲೀಸ್ ಇಲಾಖೆಯಲ್ಲೊಬ್ಬ ಖಡಕ್ ಆಫೀಸರ್ ಎನ್ನಿಸಿಕೊಂಡಿದ್ದರು. ಭೂಗತ ಪಾತಕಿಗಳ ಕಾರಸ್ಥಾನ ಎನಿಸಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೌಡಿ ಸಾಮ್ರಾಜ್ಯಕ್ಕೆ ಕರಾಳ ಸ್ವಪ್ನದಂತಿದ್ದರು. 90ರ ದಶಕದಲ್ಲಿ ಪ್ರಬಲಗೊಂಡಿದ್ದ ಪಾತಕ ಲೋಕದ ವಿರುದ್ದ ಸಮರ ಸಾರಿದ್ದ ಪೊಲೀಸ್ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯ ರೌಡಿ ನಿಗ್ರಹ ದಳಕ್ಕೆ ಇವರನ್ನೇ ಸಾರಥಿಯನ್ನಾಗಿಸಿತ್ತು. ಮತ್ತೊಬ್ಬ ಚಾಣಾಕ್ಷ ಅಧಿಕಾರಿ ಅಶೋಕನ್ ಅವರ ಜೊತೆಗೂಡಿ ರೌಡಿ ನಿಗ್ರಹ ಪಡೆಯನ್ನು ಬಿಗಿಗೊಳಿಸಿದ್ದ ಜಯಂತ್ ಶೆಟ್ಟಿ ತಂಡವು, ಭೂಗತ ದೊರೆ ಮುತ್ತಪ್ಪ ರೈ ಸಹಚರರ ಹಾಗೂ ದಾವೂದ್ ಬಗ್ಗೆ ಸಹಾನುಭೂತಿ ಹೊಂದಿದ್ದ ರೌಡಿಗಳನ್ನು ಮಟ್ಟ ಹಾಕಿದ್ದ ಯಶಸ್ಸು ರಾಜ್ಯ ಪೊಲೀಸ್ ಇಲಾಖೆಯಲ್ಲೇ ಮೈಲಿಗಲ್ಲು.
ಮಂಗಳೂರು ಸುತ್ತಮುತ್ತಲ ರೌಡಿ ಕೃತ್ಯಗಳಿಗೆ ಅಂಕುಶ ಬಿದ್ದಿದ್ದೇ ಆ ಸಮಯದಲ್ಲಿ. ಈ ನಿಷ್ಟೂರ ಪೊಲೀಸ್ ಕಾರ್ಯಾಚರಣೆಯ ಯಶಸ್ಸೇ ರಾಜ್ಯ ಮಟ್ಟದಲ್ಲಿ ರೌಡಿ ನಿಗ್ರಹ ಪಡೆಗೆ ಸ್ಫೂರ್ತಿಯಾಗಿತ್ತು. ಅಷ್ಟೇ ಆಲ್ಲ, ಜಯಂತ್ ಶೆಟ್ಟಿ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿದ್ದ ಸರ್ಕಾರ, ಅವರನ್ನು ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಗೂ ನಿಯುಕ್ತಿಗೊಳಿಸಿತ್ತು. ಕರಾವಳಿ, ಮಲೆನಾಡು, ಬೆಂಗಳೂರು ಸಹಿತ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಿದ್ದ ಜಯಂತ್ ಶೆಟ್ಟಿಯವರ ಯಶೋಗಾಥೆಗೆ ಪದಕಗಳು ಪುರಸ್ಕಾರಗಳೇ ಸಾಕ್ಷಿ.

























































