ಉಡುಪಿ: ತೆಂಕನಿಡಿಯೂರು ಗ್ರಾಮದ ಮಹಿಮಾ ಹೋಂಸ್ಟೇ ಬಳಿ ಸಾರ್ವಜನಿಕ ರಸ್ತೆಗೆ ಸ್ಥಳೀಯರಿಂದ ನಾಲ್ಕೈದು ವರ್ಷಗಳಿಂದ ತಡೆ ಉಂಟಾಗಿದೆ. ಈ ರಸ್ತೆಯು ಸುಮಾರು 15 ಮನೆಗೆ ಸಂಪರ್ಕ ರಸ್ತೆಯಾಗಿದ್ದು ಬೈಲಕೆರೆ ಕಡೆಹೋಗುವವರಿಗೆ ಇದುವೇ ಪ್ರಮುಖ ಮಾರ್ಗ.
ಸ್ಥಳೀಯರು ಅದ್ಯಾವ ಕಾರಣಕ್ಕೆ ಈ ರಸ್ತೆಯನ್ನು ಬಂದ್ ಮಾಡಿದರೋ ಗೊತ್ತಿಲ್ಲ. ಆ ಮಾರ್ಗ ಮೂಲಕ ಕ್ರಮಿಸಬೇಕಿದ್ದ ಜನರು ಇದರಿಂದಾಗಿ ಕಂಗಾಲಾಗಿದ್ದರು. ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಸುತ್ತಮುಥಲ ಗ್ರಾಮಸ್ಥರು ಶಾಸಕ ರಘುಪತಿ ಭಟ್ ಬಳಿ ಮನವಿ ಮಾಡಿದ್ದರು.
ಶನಿವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ರಘುಪತಿ ಭಟ್ ಸ್ಥಳೀಯರೊಂದಿಗೆ ಚರ್ಚಿಸಿ ಸಮಸ್ಯೆ ಅರಿತರು. ರಸ್ತೆ ಬ್ಲಾಕ್ ಮಾಡಿದ್ದಾರೆನ್ನಲಾದ ಗುಂಪಿನ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶರತ್ ಬೈಲಕೆರೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಕೃಷ್ಣಯ್ಯ ಶೆಟ್ಟಿ, ಪ್ರದೀಪ್ ಶೆಟ್ಟಿ, ವಿನೋದ್, ಗಾಯತ್ರಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಸಾಲ್ಯಾನ್ ಹಾಗೂ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕರಾದ ಉಪೇಂದ್ರ, ಮಲ್ಪೆ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಸಹಿತ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.