ಬೆಂಗಳೂರು: ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಬೆಳಗಾವಿಯಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ ಹೀಗೆ ನಾಡ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದವು.
ಈ ಕುರಿತಂತೆ ಕೇಂದ್ರಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದಲ್ಲಿ ಈ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ಕನ್ನಡಿಗರ ಕಡಗಣನೆ ಹಾಗೂ ಕೂಡಲೇ ರಾಜ್ಯದಲ್ಲಿ ಕನ್ನಡ ವಿರೋಧಿ ಎಂಇಎಸ್ ಸಂಘಟನೆ ನಿಷೇಧ ಮತ್ತು ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ರದ್ದುಗೊಳಿಸುವಂತೆ ತಾಲ್ಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ಸಂಜೀವ್ ನಾಯಕ್, ಕನ್ನಡಿಗರ ಸ್ವಾಭಿಮಾನ ಭುಗಿಲೇಳುವ ಮುನ್ನವೇ ಸರ್ಕಾರ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧ ಮಾಡಿ, ಗಡಿಭಾಗದಲ್ಲಿ ಕನ್ನಡಿಗರ ರಕ್ಷಣೆಯನ್ನು ಸರ್ಕಾರ ಮಾಡಬೇಕಿದೆ. ಮಹಾಜನ್ ವರದಿಯಲ್ಲಿ ಕನ್ನಡ ನಾಡಿಗೆ ಸಂಪೂರ್ಣ ನ್ಯಾಯ ದೊರಕದಿದ್ದರೂ ನಾವು ಸೌಹಾರ್ದದಿಂದ ಬದುಕುವ ಉದ್ದೇಶದಿಂದ ಮಹಾಜನ್ ವರದಿಯನ್ನು ಒಪ್ಪಿಕೊಂಡಿದ್ದೇವೆ. ಆದರೆ ವರದಿಯನ್ನು ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರವೇ ಮೀನಾಮೇಷ ಎಣಿಸುತ್ತಿದೆ. ಚುನಾವಣೆಗಳು ಬಂದಾಗ ಮಾತ್ರ ಕನ್ನಡಿಗರ ಸ್ವಾಭಿಮಾನ ಕೆಣಕಲು ಪ್ರಚೋದನೆ ನೀಡುವಂತಹಾ ಹೇಳಿಕೆಯನ್ನು ನೀಡುತ್ತಾರೆ. ಇಂತಹ ಅವಾಂರಗಳು ನಿಲ್ಲಬೇಕು ಎಂದು ಆಗ್ರಹಿಸಿದರು.
ಹಿರಿಯ ಕನ್ನಡ ಪರ ಹೋರಾಟಗಾರ ತ.ನ ಪ್ರಭುದೇವ ಮಾತನಾಡಿ ಉಪ ಚುನಾವಣೆ ಹಾಗೂ ತಮ್ಮ ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದೆ. ಚುನಾವಣೆ ಬಳಿಕ ಸರ್ಕಾರವೇ ಈ ಬಗ್ಗೆ ಗಮನ ಹರಿಸುವುದಿಲ್ಲ. ಬೆಳಗಾವಿಯಲ್ಲಿನ ನಮ್ಮ ರಾಜಕೀಯ ನಾಯಕರು ದಿಟ್ಟ ನಿರ್ಧಾರಕ್ಕೆ ಬಂದು ಮರಾಠಿಗರ ಒಲೈಕೆ ರಾಜಕಾರಣ ಬಿಟ್ಟು ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇದಕ್ಕೂ ಮುನ್ನ ರೈಲ್ವೆ ತಡೆ ಮಾಡಿ ಪ್ರತಿಭಟನೆ ಮಾಡಲು ಮುಂದಾದ ಹೋರಾಟಗಾರರನ್ನು ರೈಲ್ವೆ ಪೊಲೀಸರು ತಡೆದು ನಿಲ್ದಾಣದ ಮುಂಭಾಗ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರು.
ಮುಖಂಡರಾದ ಸು.ನರಸಿಂಹ ಮೂರ್ತಿ, ನಂಜಪ್ಪ, ರಮೇಶ್, ಶ್ರೀನಿವಾಸ್, ಚೌಡರಾಜು ಮೊದಲಾದವರು ಹೋರಾಟದಲ್ಲಿ ಭಾಗಿಯಾದರು..