ವರದಿ: ಮಂಜುನಾಥ್ ಗಾಣಿಗ
ಬೈಂದೂರು : ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಇಂದು ಉಡುಪಿ ಜಿಲ್ಲೆಯ ಬೈಂದೂರು ತಹಶಿಲ್ದಾರ ಕಛೇರಿಯೆದುರು ಕಾರ್ಯಕರ್ತರು ಸಿಲಿಂಡರ್ ಒಳಗೆ ಕಟ್ಟಿಗೆಯಿಂದ ಬೆಂಕಿ ಹೊತ್ತಿಸಿ ಅಡುಗೆ ಮಾಡುವುದರ ಪ್ರತಿಭಟನೆ ನೆಡೆಸಿದರು.
ಬೈಂದೂರಿನ ತಹಶಿಲ್ದಾರರ ಕಚೇರಿಯೆದುರು ಎದುರು ಬುಧವಾರ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಯುವ ಕಾಂಗ್ರೇಸ್ ಮುಖಂಡರಾದ ಶೇಖರ ಪೂಜಾರಿ, ಸ್ಥಳೀಯ ಕಾಂಗ್ರೇಸ್ ನಾಯಕರಾದ ಮದನ್‌ಕುಮಾರ್ ಉಪ್ಪುಂದ, ಜಗದೀಶ್ ದೇವಾಡಿಗ, ನಾಗರಾಜ್ ಗಾಣಿಗ ಬಂಕೇಶ್ವರ, ಮಂಜುನಾಥ ಪೂಜಾರಿ, ಗಣೇಶ್ ಪೂಜಾರಿ, ಮಣಿಕಂಠ ದೇವಾಡಿಗ, ಕೊಲ್ಲೂರು ಮಹಿಳಾ ಕಾಂಗ್ರೇಸ್ ಮುಖಂಡೆ ಗ್ರೀಷ್ಮಾ ಬೀಡೆ ಮೊದಲಾದವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ , ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ಮತ್ತು ಅಡುಗೆ ಅನಿಲದ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ. ದೇಶ ಹಾಳು ಮಾಡಬೇಡಿ ದೇಶದಲ್ಲಿ ಬಿಜೆಪಿ ಸರ್ಕಾರ ನರಕ ಸೃಷ್ಟಿಸುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ನರೇಂದ್ರ ಮೋದಿ ಅಧಿಕಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಮಯದಲ್ಲಿ ಬೈಂದೂರು ತಹಶಿಲ್ದಾರರಾದ ಶೋಭಾಲಕ್ಷ್ಮೀ ಇವರಿಗೆ ಬೈಂದೂರು ಕ್ಷೇತ್ರದ ಕಾಂಗ್ರೇಸ್ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.