ಬೆಂಗಳೂರು: ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜ್ಯದ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದು ಆಮ್ ಆದ್ಮಿ ಪಾರ್ಟಿ ಪೋಷಕರ ಪರವಾಗಿ ಶುಲ್ಕ ಇಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿತು.
ಆಮ್ ಆದ್ಮಿ ಪಾರ್ಟಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪೋಷಕರು, ಪೋಷಕರ ಸಂಘ, ಸಮನ್ವಯ ಸಮಿತಿ, ವಾಯ್ಸ್ ಆಫ್ ಪೇರೆಂಟ್ಸ್ ಮೊದಲಾದ ಸಂಸ್ಥೆಗಳು ಪಾಲ್ಗೊಂಡಿದ್ದರು.
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಸಮಸ್ಯೆಗಳು ಬಿಗಡಾಯಿಸಿದೆ. ಇವರು ಎಲ್ಲಾ ಖಾಸಗಿ ಶಾಲೆಗಳಿಗೆ 30% ಶುಲ್ಕ ಇಳಿಸಲು ಆದೇಶಿಸಿದ್ದರು. ಆದರೆ ಹೇಗೆ ಇಳಿಸಬೇಕು ಎಂಬ ಸ್ಪಷ್ಟತೆ ನೀಡಲಿಲ್ಲ. ಶಾಲೆಗಳು ಹೈಕೋರ್ಟ್ ಮೊರೆ ಹೋಗಿದ್ದವು ಮತ್ತು ಹೈಕೋರ್ಟ್ 15% ಶುಲ್ಕ ಇಳಿಸಲು ಆದೇಶ ನೀಡಿದೆ. ಇದರಿಂದ ಏನೂ ಪ್ರಯೋಜನ ಇಲ್ಲ. ಪೋಷಕರು ಶುಲ್ಕದ ಉಳಿದ ಮೊತ್ತವನ್ನು ಭರಿಸಲು ಸರ್ಕಾರ ಹೇಗೆ ನೆರವಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಪ್ರತೀ ಮಗುವಿಗೆ 14 ವರ್ಷದ ತನಕ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಆದರೆ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಸೋತಿದೆ ಎಂದರು
ಸಧ್ಯಕ್ಕೆ ಸರ್ಕಾರ ಶಾಲಾ ಶುಲ್ಕದ ಹೊರೆಯನ್ನು ಇಳಿಸುವ ಮುಖಾಂತರ ಪೋಷಕರ ಆರ್ಥಿಕ ಸಂಕಷ್ಟದಲ್ಲಿ ಅವರ ಕೈ ಹಿಡಿಯಬೇಕು. ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಅಥವಾ ಶಿಕ್ಷಕರ ಸಂಬಳವನ್ನು ಸರ್ಕಾರವೇ ಭರಿಸುವ ಮುಖಾಂತರ ಪೋಷಕರ ಮೇಲಿನ ಶುಲ್ಕದ ಹೊರೆಯನ್ನು ಇಳಿಸಬಹುದು ಎಂದು ಆಗ್ರಹಿಸಿದರು.
ಈ ಯೋಜನೆ 20-21 ಮತ್ತು 21-22 ರ ಶೈಕ್ಷಣಿಕ ವರ್ಷಗಳಿಗೂ ಜಾರಿ ಮಾಡಬೇಕು. ಎಲ್ಲಾ ಸ್ಟಾಕ್. ಹೋಲ್ಡರ್ ಗಳನ್ನು ಬಲಪಡಿಸಲು ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕು. ಸರ್ಕಾರ ಪ್ರತೀ ವಾರ ವಿದ್ಯಾರ್ಥಿಗಳ ದಾಖಲಾತಿ ಮಾಹಿತಿಯನ್ನು ಪ್ರಕಟ ಮಾಡಬೇಕು. ಆಮ್ ಆದ್ಮಿ ಪಾರ್ಟಿ ಕರ್ನಾಟಕ ಸರ್ಕಾರ ಸಮರ್ಪಕ ನಿರ್ಣಯವನ್ನು ತೆಗೆದುಕೊಳ್ಳುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ. ಇದೇ ಬರುವ ಆದಿತ್ಯವಾರ ಫ್ರೀಡಂ ಪಾರ್ಕಿನಲ್ಲಿ “ಚಿಂತನ ಮಂಥನ” ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿ, ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ, ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಪೋಷಕರ ಸಮನ್ವಯ ಸಮಿತಿಯ ಚಿದಾನಂದ್, ಎಎಪಿ ಮುಖಂಡರಾದ ಲಕ್ಷ್ಮೀಕಾಂತ ರಾವ್, ರಾಜಶೇಖರ್ ದೊಡ್ಡಣ್ಣ, ದರ್ಶನ್ ಜೈನ್, ಜಗದೀಶ್ ಚಂದ್ರ, ಉಷಾ ಮೋಹನ್, ಪ್ರಕಾಶ್ ನೆಡುಂಗಡಿ, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್ ಹಾಗೂ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.