ತ್ರಿಶೂರ್: ಇನ್ನೇನು ವಿಧಾನಸಭೆ ಚುನಾವಣೆಗೆ ಸನ್ನದ್ಧವಾಗಿರುವ ಹೊತ್ತಿನಲ್ಲಿಯೇ ಬಿಜೆಪಿ ಕೇರಳದಲ್ಲಿ ಕಮಾಲ್ ಮಾಡಲು ಹೊರಟಿದ್ದು, ಅದರ ಭಾಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತ್ರಿಶ್ಶೂರಿನಲ್ಲಿ ರಣಕಹಳೆ ಮೊಳಗಿಸಿದರು.
ಗುರುವಾರ ಬೆಳಿಗ್ಗೆಯೇ ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕೇರಳ ಸಹ ಪ್ರಭಾರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮುಂತಾದವರ ಜತೆಯಲ್ಲಿ ಕೇರಳಕ್ಕೆ ಬಂದ ನಡ್ಡಾ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತು. ಕೊಚ್ಚಿ ವಿಮಾನ ನಿಲ್ದಾಣದಿಂದ ಸುಮಾರು ಒಂದು ಕೀ.ಮೀ ಗೂ ಹೆಚ್ಚು ದೂರ ನಾಯಕರನ್ನು ಮೆರವಣಿಗೆಯಲ್ಲಿ ಕರೆದೊಯ್ದ ಕಾರ್ಯಕರ್ತರು, ಪುಷ್ಪವೃಷ್ಠಿಯಲ್ಲಿ ನಾಯಕರು ಮುಳುಗೇಳುವಂತೆ ಮಾಡಿದರು.
ಡಿಸಿಎಂ ಅವರು ಸೇರಿದಂತೆ ನಡ್ಡಾ ಅವರ ಜತೆಯಲ್ಲಿದ್ದ ನಾಯಕರೆಲ್ಲರೂ ಕೇರಳ ಬಿಜೆಪಿ ಕಾರ್ಯಕರ್ತರ ಉತ್ಸಾಹ ಮತ್ತು ಪ್ರೀತಿಗೆ ಮಾರುಹೋದರು. ಈ ಸಂದರ್ಭದಲ್ಲಿ ಮಾತನಾಡಿದ ನಡ್ಡಾ ಅವರು “ಕೇರಳದಲ್ಲಿ ಕಮಲ ಅರಳಲಿದೆ” ಎಂದು ಫೋಷಿಸಿದರು.
ತ್ರಿಶ್ಶೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ:
ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್’ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಟಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿಯನ್ನು ಹುಟ್ಟುಹಾಕಲು ನಡ್ಡಾ ಅವರು ಸಂತೋಷ್, ಡಾ.ಅಶ್ವತ್ಥನಾರಾಯಣ ಅವರೊಂದಿಗೆ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಿರುಗಾಳಿಯಂತೆ ಪರ್ಯಟನೆ ಮಾಡಿದರು.
ಎಲ್ಲ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ಸೇರಿ ವಿವಿಧ ಹಂತದ ಜನಪ್ರತಿನಿಧಿಗಳ ಜತೆ ಮಹತ್ವದ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ ನಡ್ಡಾ ಅವರು, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸುರೇಂದ್ರನ್ ಹಾಗೂ ರಾಜ್ಯದ ಪದಾಧಿಕಾರಿಗಳಿಗೆ ಸ್ಪಷ್ಟ ದಿಕ್ಸೂಚಿ ನೀಡಿದರು. ಹಾಗೆಯೇ ಪ್ರಭಾರಿಗಳು, ಸಹ ಪ್ರಭಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯವಾದ ಮಾರ್ಗದರ್ಶನ ಪಡೆಯುವಂತೆ ಸೂಚಿಸಿದರು.
ಅಭಿವೃದ್ಧಿಯಿಂದ ದೂರ ಮಾಡಿ ಕೇರಳವನ್ನು ಹಿಂದುಳಿಯುವಂತೆ ಮಾಡಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು. “ಈ ಬಾರಿ ಬಿಜೆಪಿ” ಎಂಬ ಉದ್ಘೋಷವನ್ನು ಎಲ್ಲೆಡೆ ಮೊಳಗಿಸಬೇಕು ಎಂದು ಮುಖಂಡರಿಗೆ ನಡ್ಡಾ ಅವರು ಕರೆ ನೀಡಿದರು.
ತ್ರಿಶ್ಶೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುರಿತಾದ ಪುಸ್ತಕವೊಂದನ್ನು ನಡ್ಡಾ ಅವರು ಬಿಡುಗಡೆ ಮಾಡಿದರು.