ಬೆಂಗಳೂರು: ಆಡಳಿತವರ್ಗದ ಲೋಪ, ನಿರ್ಲಕ್ಷ್ಯದ ವಿರುದ್ದ ಸಿಡಿದೆದ್ದು, ಎಚ್ಚರಿಕೆ ನೀಡುವ ರೀತಿ ಆಗಾಗ್ಗೆ ಅಖಾಡಕ್ಕಿಳಿಯುವ ಮೂರು ‘ಗಾಂಧಿ ಕೋತಿ’ಗಳು ಬೆಂಗಳೂರಿನಲ್ಲಿ ಮತ್ತೊಮ್ಮೆ ಜನರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿವೆ.
ಶಂಕರಾಪುರಂ ಬಳಿ ಬಸವನಗುಡಿ ರಸ್ತೆಯ ಬದಿಯಲ್ಲಿ ದೈತ್ಯ ಮರವೊಂದು ಸುಮಾರು 2 ವರ್ಷಗಳಿಂದ ಒಣಗಿಹೋಗಿತ್ತು. ಅದರ ಎಗ್ಗುಗಳು ಒಂದೊಂದಾಗಿಯೇ ಮುರಿದು ಬೀಳುತ್ತಿದ್ದವು. ರಸ್ತೆಗಳಲ್ಲಿ ಸಂಚರಿಸುವವರ ಪಾಲಿಗೆಈ ಮರ ಸಂಚಕಾರ ಎಂಬಂತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿರಲಿಲ್ಲ.
ಈ ನಡುವೆ ಈ ಮರದ ಬೃಹತ್ ಕೊಂಬೆಯೊಂದು ಸೋಮವಾರ ಇದ್ದಕ್ಕಿದ್ದಂತೆ ಮುರಿದು ಬಿದ್ದು ಅವಾಂತರವೇ ಸೃಷ್ಟಿಯಾಯಿತು. ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದೇ ತಡ, ಸಾಮಾಜಿಕ ಹೋರಾಟಗಾರ, ನಮೋ ಸಮಾಜ್ ಮುಖಂಡ ಜಿ.ಆರ್. ಅನಿಲ್ ಕುಮಾರ್ ಅವರು ಸ್ಥಳಕ್ಕೆ ಧಾವಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಲವು ತಾಸುಗಳು ಕಳೆದರೂ ಅಧಿಕಾರಿಗಳು ಸ್ಥಳಕ್ಕಾಗಮಿಸಲಿಲ್ಲ. ಇದರಿಂದ ಕುಪಿತರಾದ ಅನಿಲ್ ಕುಮಾರ್ ಅವರು ಹೋರಾಟಗಾರರನ್ನು ಒಗ್ಗೂಡಿಸಿದರು. ವ್ಯವಸ್ಥೆಯ ಲೋಪಗಳನ್ನು ಎತ್ತಿಹಿಡಿಯುವ ಮೂರು ಕೋತಿಗಳನ್ನು ಅಖಾಡಕ್ಕಿಳಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಈ ವಿಚಾರ ಮಾಧ್ಯಮಗಳ ಮೂಲಕ ಪ್ರತಧ್ವನಿಸಿದ್ದೇ ತಡ, ಬಿಬಿಎಂಪಿ ಸಿಬ್ಬಂದಿ ಎದ್ದೋ ಬಿದ್ದೋ ಸ್ತಳಕ್ಕೆ ಧಾವಿಸಿ ಬಂದರು. ಕೂಡಲೇ ಬಿಬಿಎಂಪಿ ಅರಣ್ಯ ವಿಭಾಗದ ಕಾರ್ಯಾಚರಣೆ ತಂಡವೂ ಸ್ಥಳಕ್ಕೆ ಕರೆಸಿ ಮರದ ಅವಶೇಷಗಳನ್ನು ತೆರವು ಗೊಳಿಸಿದರು.
ಅಷ್ಟೇ ಅಲ್ಲ, ಒಣಗಿ ಬೀಳುವ ಹಂತದಲ್ಲಿದ್ದ ದೈತ್ಯ ಮರವನ್ನು ತರಾತುರಿಯಲ್ಲೇ ಬೀಳಿಸಿದರು. ಆ ಮೂಲಕ ಸಾರ್ವಜನಿಕರಲ್ಲಿದ್ದ ಆತಂಕವನ್ನು ದೂರಗೊಳಿಸಿರು.