ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಂತರ ತಮ್ಮ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯ ಪದಾಧಿಕಾರಿಗಳ ನೂತನ ಪಟ್ಟಿ ಬಗ್ಗೆ ಬಹಿರಂಗ ಟೀಕೆ ಮಾಡಿದ್ದಾರೆ. ಇದು ‘ಕೆಜೆಪಿ-2’ ಎಂದು ವಿಜಯೇಂದ್ರ ಸೈನ್ಯ ವಿರುದ್ಧ ಪರೋಕ್ಷವಾಗಿ ಹೇಳಿದ್ದಾರೆ.
ಶನಿವಾರ ಬಿಡುಗಡೆಯಾಗಿರುವ ರಾಜ್ಯ ಬಿಜೆಪಿ ಪದಾಧಿಕಾರಿಗಳ ನೂತನ ಪಟ್ಟಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,
ಯಡ್ಡಿಯೂರಪ್ಪನವರದ್ದು ಕೆಜೆಪಿ-1, ಇದು ಕೆಜೆಪಿ-2, ಮೊಮ್ಮಗನದು ಕೆಜೆಪಿ-3 ಎಂದು ವ್ಯಂಗ್ಯವಾಡಿದ್ದಾರೆ.
ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆವರೆಗೆ ಎಂದಿರುವ ಯತ್ನಾಳ್, 28 ಸೀಟ್ ಗೆಲ್ಲಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮಕ್ಕಳು ಹೇಗೆ ಸಿಗರೇಟ್ ಪ್ಯಾಕ್’ನಲ್ಲಿ ಮಾಡಿದ ಮನೆಯ ರೀತಿ ಈ ಬಿಜೆಪಿ ಪಟ್ಟಿಯೂ ಹಾಗೆ ಬಿದ್ದು ಹೋಗಲಿದೆ ಎಂದರು.
ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಪಕ್ಷ ಸೇರುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಮೇಜರ್ ಸರ್ಜರಿ ಮಾಡಲೇಬೇಕು. ಮಾಡದಿದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ ವೈಖರಿಯೂ ಕುತೂಹಲಕ್ಕೀಡು ಮಾಡಿದೆ.