ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮೂಡಾ ಹಗರಣದ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿತ್ತು. ಜಿಂದಾಲ್ ಪ್ರಕರಣದಲ್ಲಿ ಧಾವೆ ಹೂಡಿ ಸಿಎಂ ಆಗಿದ್ದ ಯಡಿಯೂರಪ್ಪ ರಾಜೀನಾಮೆಗೆ ಕಾರಣವಾಗಿದ್ದ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಇದೀಗ ಸಿದ್ದರಾಮಯ್ಯ ಕುಟುಂಬದ ವಿರುದ್ದವೂ ಕಾನೂನು ಸಮರಕ್ಕೆ ಮುನ್ನುಡಿ ಬರೆದಿದೆ. ಇದೀಗ ರೈತ ಸಂಘಟನೆಗಳೂ ಅದೇ ರೀತಿ ಬೇಡಿಕೆ ಮುಂದಿಟ್ಟಿರುವುದು ಕುತೂಹಲಕಾರಿ ಬೆಳವಣಿಗೆ..
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮೂಡಾ ಹಗರಣದಲ್ಲಿ ಇದೀಗ ರೈತ ಸಂಘಟನೆಗಳೂ ಮಧ್ಯ ಪ್ರವೇಶಿಸಿದೆ. ಮೂಡಾ ಹಗರಣ ವಿಚಾರದಲ್ಲಿ ಹೋರಾಟದ ಅಖಾಡಕ್ಕೆ ಧುಮುಕಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದ ಹಗರಣ ಕುರಿತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯಪಾಲರಿಗೆ ಮನವಿ ಮಾಡಿದೆ.
ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದ ಹಗರಣ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಾರದ ಹಗರಣ ವಾಗಿದ್ದು ಪ್ರಭಾವಿ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಬಾಗಿದಾರರಾಗಿರುವ ಕಾರಣ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಗರಣದಲ್ಲಿ ಪಾಲುದಾರರಾಗಿರುವ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಕಾಯ್ದೆ ಅಡಿಯಲ್ಲಿ ಶಿಕ್ಷಿಸಬೇಕು. ಎಂದು ರಾಜ್ಯಪಾಲರನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ರಾಜಭವನಕ್ಕೆ ತೆರಳಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ರೈತರ ನಿಯೋಗ ಶನಿವಾರ ರಾಜ್ಯಪಾಲ ಥಾವರ್ ಚಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕಳೆದ ಒಂದು ವರ್ಷಗಳ ಹಿಂದೆ ಮೂಡಾ ಕಚೇರಿಯಲ್ಲಿನ ದಾಖಲಾತಿಗಳು ಹಾಗೂ ಕಡತಗಳು ಕಳುವು ಆಗಿದ್ದು ಈ ಬಗ್ಗೆ ರೈತ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು ಅವತ್ತಿನ ದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪ್ರಭಾವಿಗಳಿಂದ ಲಪಟಾಯಿಸುವುದು ತಪ್ಪುತಿತ್ತು. ಇಂದು ಬಹುತೇಕ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರೇ ಪ್ರತಿನಿಧಿಗಳಾಗಿರುವ ಕಾರಣ ಈ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ರೈತರಿಗೆ ಸಾರ್ವಜನಿಕರಿಗೆ ಬಡವರಿಗೆ ವ್ಯವಸ್ಥಿತ ವಂಚನೆ ಮಾಡುತ್ತಿದ್ದಾರೆ. ರೈತರ ಜಮೀನು ವಶಪಡಿಸಿಕೊಳ್ಳುವಾಗ ವಾಮಮಾರ್ಗಗಳನ್ನು ಬಳಸಿ ರೈತರಿಗೆ ಕಡಿಮೆ ಹಣ ನೀಡಿ ವಂಚಿಸಿ ರಿಯಲ್ ಎಸ್ಟೇಟ್ ದಳ್ಳಾಳಿಗಳು ಮೋಸ ಮಾಡುತ್ತಿದ್ದಾರೆ. ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ನೀಡದೇ ಇರುವ ಕೆಲವು ದಳ್ಳಾಳಿಗಳು ನಾವು ಭೂಮಿ ನೀಡಿದ್ದೇವೆ ಎಂದು ಸುಳ್ಳು ದಾಖಲಾತಿ ನೀಡಿ ನಿವೇಶನ ಪಡೆದಿದ್ದಾರೆ ಹಾಲಿ, ಮಾಜಿ ಜನಪ್ರತಿನಿಧಿಗಳು. ಹಲವಾರು ನಿವೇಶನಗಳನ್ನು ಪಡೆದು. ಸಾಮಾನ್ಯರಿಗೆ ಬಡವರಿಗೆ ಸಿಗಬೇಕಾದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಹಗರಣದಲ್ಲಿ ಆಡಳಿತ ಪಕ್ಷ.ವಿರೋಧ ಪಕ್ಷಗಳ ಪ್ರಭಾವಿ ಮುಖಂಡರೇ ಬಾಗಿಗಳಾಗಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಎತ್ತಿ ಹಿಡಿಯಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದು ಸೂಕ್ತವಾಗಿದೆ ಎಂದು ರಾಜ್ಯಪಾಲರನ್ನು ಒತ್ತಾಯಿಸಲಾಯಿತು ಎಂದು ಕುರುಬುರ್ ಶಾಂತಕುಮಾರ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಿಯೋಗದಲ್ಲಿ ಕನ್ನಡ ಚಳುವಳಿ ಸಂಘದ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ್, ವಕೀಲರಾದ ಎಲ್.ರವಿಕುಮಾರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ತುಮಕೂರು ಶಿವಕುಮಾರ್, ಬಾಗೇಪಲ್ಲಿ ಗೋವಿಂದರೆಡ್ಡಿ, ಸುಂದ್ರಪ್ಪ ಉಪಸ್ಥಿತರಿದ್ದರು.