ಉಡುಪಿ : ಕೊರೋನಾ ಸಂಕಟಕಾಲದಲ್ಲಿ ದೇವಾಲಯಗಳಲ್ಲಿ ದೇವರ ದರ್ಶನ ಮಾಡಲು ಭಕ್ತರಿಗೆ ಅವಕಾಶವಿರಲಿಲ್ಲ. ನಿಯಮ ಸಡಿಲಿಕೆ ನಂತರವಷ್ಟೇ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅವಕಾಶವಿದೆ.
ಈ ನಡುವೆ, ಕರಾವಳಿಯಲ್ಲಿರುವ ಪುರಾಣಪ್ರಸಿದ್ದ ದೇವಾಲಯ ಕೊಲ್ಲೂರು ಮೂಕಾಂಬಿಕ ಕ್ಷೇತ್ರದಲ್ಲಿ ಮತ್ತಷ್ಟು ಟಫ್ ರೂಲ್ ಜಾರಿಗೆ ಬಂದಿದೆ.
ಕೊಲ್ಲೂರು ಮೂಕಾಂಬಿಕಾ ದೇಗುಲದ ದರ್ಶನಕ್ಕೆ ಬರುವ ಭಕ್ತರು ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಹೊಂದಿರಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಅಷ್ಟೇ ಆಲ್ಲ, ಕೇರಳದಿಂದ ಬರುವ ಭಕ್ತರು 72ಗಂಟೆಯೊಳಗೆ ಕೋವಿಡ್ ಪರೀಕ್ಷೆಗೊಳಗಾಗಿರುವ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಬೇಕಿದೆ. ಇದು ಇಲ್ಲವಾದಲ್ಲಿ ದೇವಸ್ಥಾನಕ್ಕೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕರಾವಳಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.