ಬೆಂಗಳೂರು: ಶಾಲಾಮಕ್ಕಳ ಬಿಸಿಯೂಟ ಯೋಜನೆಗೆ ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿಸುವ ರಾಜ್ಯ ಸರ್ಕಾರದ ಸುತ್ತೋಲೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಶಿಕ್ಷಕರಿಗೆ ಬೋಧಕೇತರ ಚಟುವಟಿಕೆಗಳ ಹೊಣೆ ನೀಡಿದರೆ ಶಿಕ್ಷಣದ ಗುಣಮಟ್ಟ ಕುಸಿತವಾಗುತ್ತದೆ ಎಂದು ಪ್ರತಿಪಾದಿಸಿರುವ ಮಾಜಿ ಶಾಸಕ ರಮೇಶ್ ಬಾಬು, ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಸಲಹೆ ಮುಂದಿಟ್ಟಿದ್ದಾರೆ.
ಈ ಸಂಬಂಧ ಕೆಪಿಸಿಸಿ ವಕ್ತಾರರೂ ಆಗಿರುವ ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ. ಶಿಕ್ಷಣ ಇಲಾಖೆಯು ಪ್ರತೀ ಬಾರಿ ವಿವಿಧ ಸುತ್ತೋಲೆಗಳನ್ನು ಹೊರಡಿಸುವ ವೈಖರಿ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಸಿಯೂಟ ಯೋಜನೆಯ ವೈಫಲ್ಯಗಳಿಗೆ ಶಿಕ್ಷಕರನ್ನು ಹೊಣೆ ಮಾಡುವುದು ಸರಿಯಲ್ಲ..!
ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಶಾಲಾ ಹಂತದಲ್ಲಿ ಮದ್ಯಾಹ್ನ ಉಪಹಾರ ಯೋಜನೆ (ಬಿಸಿಯೂಟ ಯೋಜನೆ) ಜಾರಿಯಲ್ಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ರಾಜ್ಯದ ಶಾಲೆಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಬಿಸಿಯೂಟ ಯೋಜನೆಗೆ ಶಾಲಾ ಮುಖ್ಯ ಶಿಕ್ಷಕರು ಮತ್ತು ಇತರೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಆದರೆ ಕಲಬುರ್ಗಿ ಜಿಲ್ಲೆಯ ಒಂದು ಪ್ರಕರಣವನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯು ಬಿಸಿಯೂಟ ಯೋಜನೆಯ ವೈಫಲ್ಯಗಳಿಗೆ ಶಾಲೆಯ ಮುಖ್ಯ ಶಿಕ್ಷಕರನ್ನು ಹೊಣೆ ಮಾಡುವ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ ಅನೇಕ ಗೊಂದಲಗಳಿಗೆ ಅವಕಾಶ ನೀಡಿರುತ್ತದೆ. ಬಿಸಿಯೂಟ ಯೋಜನೆಯು ಶಾಲೆಯ ಮುಖ್ಯ ಶಿಕ್ಷಕರಿಗೆ ಅಥವಾ ಶಿಕ್ಷಕರಿಗೆ ಭೋದಕೇತರ ಚಟುವಟಿಕೆಯಾಗಿದ್ದು, ಹೆಚ್ಚುವರಿ ಕೆಲಸವಾಗಿರುತ್ತದೆ ಎಂದು ರಮೇಶ್ ಬಾಬು ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಬಿಸಿಯೂಟ ಯೋಜನೆಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯು ಪ್ರತೀ ಬಾರಿ ವಿವಿಧ ಸುತ್ತೋಲೆಗಳನ್ನು ಹೊರಡಿಸುವುದರ ಮೂಲಕ ಶಿಕ್ಷಕರನ್ನು ಭೋದಕೇತರ ಚಟುವಟಿಕೆಗಳಲ್ಲಿ ಭಾಗಿ ಆಗಿ ಶೈಕ್ಷಣಿಕ ಚಟುವಟಿಕೆಗಳು ಕುಂಟಿತವಾಗಲು ಅವಕಾಶ ನೀಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಈ ಜಂಟಿ ಯೋಜನೆಯು ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಿ ಆರೋಗ್ಯ ಸಂರಕ್ಷಣೆ ಮಾಡುವ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಇಡೀ ರಾಜ್ಯದಲ್ಲಿ ಬಹುತೇಕ ಶಾಲಾ ಶಿಕ್ಷಕರ ಮುಖಾಂತರ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಕೆಲವು ಭಾಗಗಳಲ್ಲಿ ಖಾಸಗಿಯವರಿಗೆ ಈ ಜವಬ್ದಾರಿ ನೀಡಲಾಗಿದೆ. ಬಿಸಿಯೂಟ ಯೋಜನೆಯಲ್ಲಿ ಆಹಾರ ಪದಾರ್ಥಗಳ ಶೇಕರಣೆ, ಅಡುಗೆಯ ಸಿಬ್ಬಂದಿಯೊಂದಿಗೆ ಸಂಯೋಜನೆ, ಬಿಸಿಯೂಟ ತಯಾರಿಕೆ ಮತ್ತು ವಿತರಣೆ, ಸುರಕ್ಷತಾ ಹಾಗೂ ಸ್ವಚ್ಚತಾ ವ್ಯವಸ್ಥೆಯ ಅಳವಡಿಕೆ ಮತ್ತು ಮೇಲ್ವಿಚಾರಣೆ, ಎಸ್ಡಿಎಂಸಿ ಸಮಿತಿ ಮತ್ತು ಪೋಷಕರೊಂದಿಗೆ ಹೊಂದಾಣಿಕೆ, ಯೋಜನೆಯ ಹಣಕಾಸು ನಿರ್ವಹಣೆ ಇತ್ಯಾದಿ ಕೆಲಸಗಳು ಒಳಗೊಂಡಿದ್ದು ಇದರಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಇತರ ಶಿಕ್ಷಕರು ಅವರ ಸಾಕಷ್ಟು ಸಮಯವನ್ನು ವಿನಿಯೋಗಿಸಬೇಕಾಗುತ್ತದೆ. ಇದರಿಂದ ಸ್ವಾಭಾವಿಕವಾಗಿ ಶೈಕ್ಷಣಿಕ ಚಟುವಟಿಕೆಗಳು ಕುಂಟಿತವಾಗುತ್ತಿವೆ. ಇದರ ಜೊತೆಗೆ ಬಿಸಿಯೂಟ ಯೋಜನೆಯ ಲೋಪ ಅಥವಾ ವಿಫಲತೆಗೆ ಮುಖ್ಯ ಶಿಕ್ಷಕರನ್ನು ಹೊಣೆಗಾರರಾಗಿ ಮಾಡುವ ಸುತ್ತೋಲೆಯಿಂದ ಅವರು ಮತ್ತಷ್ಟು ಮಾನಸಿಕ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಟಿತವಾಗಿ ಮಕ್ಕಳ ವಿಕಸನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ.
ಶಿಕ್ಷಣ ಇಲಾಖೆಯು ಪದೇ ಪದೇ ಇಂತಹ ಸುತ್ತೋಲೆಗಳ ಮೂಲಕ ಶಾಲಾ ಶಿಕ್ಷಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ. ಶಾಲಾ ಶಿಕ್ಷಕರನ್ನು ಭೋದನಾ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ನೀಡಿದರೆ ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ಶಿಕ್ಷಕರನ್ನು ಭೋದಕೇತರ ಕಾರ್ಯದಲ್ಲಿ ಹೊಣೆಗಾರರನ್ನಾಗಿ ಮಾಡುವುದು ಸಮಂಜಸವಾಗಿರುವುದಿಲ್ಲ. ಆದುದರಿಂದ ತಾವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕೆಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.