ಪಪ್ಪಾಯ ಕೇವಲ ಹಣ್ಣಷ್ಟೆ ಅಲ್ಲ. ಅದು ಔಷಧಿ ಕೂಡಾ ಹೌದು. ಜ್ಯುಸ್ ಅಥವಾ ಸಲಾಡ್’ಗೆ ಉಪಯುಕ್ತ ಅಂದುಕೊಂಡಿರುವ ಪಪ್ಪಾಯದಿಂದ ಸಿಹಿತಿಂಡಿ ಮಾಡಲೂ ಸಾಧ್ಯವಿದೆ. ಅದರಲ್ಲೂ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ..
ಬೇಕಾದ ಸಾಮಾಗ್ರಿ
- ಪಪ್ಪಾಯ ರಸ 2 ಕಪ್
- ಉಪ್ಪು ಒಂದು ಚಿಟಿಕೆ
- ತೆಂಗಿನಕಾಯಿ ಹುಡಿ 1 ವರೆ ಕಪ್
- ತುಪ್ಪ 5 ಚಮಚ
- ಏಲಕ್ಕಿ ಪುಡಿ 1 ಚಮಚ
- ಕಾರ್ನ್ ಹುಡಿ 1 ಚಮಚ
ಮಾಡುವ ವಿಧಾನ
ಮೊದಲಿಗೆ ಪಪ್ಪಾಯ ಸಿಪ್ಪೆ ಮತ್ತು ಬೀಜ ತೆಗೆದು ತುಂಡು ಮಾಡಿಕೊಳ್ಳಬೇಕು. ಒಂದು ಜಾರಿನಲ್ಲಿ ತುಂಡು ಮಾಡಿಕೊಂಡ ಪಪ್ಪಾಯ ಹಾಕಿ ನುಣ್ಣಗೆ ರುಬ್ಬಿಕೊಂಡಾಗ ರಸ ಸಿದ್ಧವಾಗುತ್ತದೆ. ನಂತರ ಒಂದು ಕಾಡಾಯಿ ಅಥವಾ ಬಾಣಲೆಯಲ್ಲಿ ಪಪ್ಪಾಯ ರಸ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು, ತೆಂಗಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಇಡಿ. ಆಮೇಲೆ ಅದಕ್ಕೆ ಕಾರ್ನ್ ಹುಡಿಯ ನೀರು, ಏಲಕ್ಕಿ ಪುಡಿ, ತುಪ್ಪ ಹಾಕಿ ಕಲಸುತ್ತ ಬನ್ನಿ. ತಳ ಬಿಡುವಾಗ ಗೋಡಂಬಿಯನ್ನು ಹಾಕಿ ಕಲಸುತ್ತ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇಡಿ. ನಂತರ ಅದನ್ನು ತಣ್ಣಗಾದ ಮೇಲೆ ಉಂಡೆ ಕಟ್ಟಿ ತೆಂಗಿನಹುಡಿಯ ಮೇಲೆ ಹೊರಳಿಸಿದರೆ ರುಚಿಯಾದ ಪಪ್ಪಾಯ ಲಡ್ಡು ಸಿದ್ಧವಾಗುತ್ತದೆ. (ಪಾಪ್ಪಯ ಸಿಹಿ ಇಲ್ಲದಿದ್ದರೆ ಸಕ್ಕರೆ ಹಾಕಬೇಕು)