ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದರು.
ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಗೆಹ್ಲಾಟ್ ಅವರಿಗೆ ನಿರ್ಗರ್ಮಿತ ರಾಜ್ಯಪಾಲ ವಜುಭಾಯಿ ವಾಲಾ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಕರ್ನಾಟಕ ಬಗ್ಗೆ ಪರಿಚಯವಿದೆ. ಕೆಲ ದಿನಗಳ ಹಿಂದಿನವರೆಗೂ ಅವರು, ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಸಂಪುಟಕ್ಕೆ ರಾಜೀನಾಮೆ ನೀಡಿದ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರನ್ನಾಗಿ ನೇಮಕ ಮಾಡಿದೆ. ಅದರಂತೆ ಇಂದು ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ್, ಸಂಸದೆ ಸುಮಲತಾ ಅಂಬರೀಶ್ ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿ ನೂತನ ರಾಜ್ಯಪಾಲರಿಗೆ ಶುಭ ಹಾರೈಸಿದರು.