ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಬಂಧಿತರಾಗಿರುವ ಆರ್ಯನ್ ಖಾನ್‌ನನ್ನು ನ್ಯಾಯಾಲಯವು ಮತ್ತೆ ಎನ್.ಸಿ.ಬಿ. ಕಸ್ಟಡಿಗೆ ನೀಡಲಾಗಿದೆ.
ಶನಿವಾರ ರಾತ್ರಿಯ ಕಾರ್ಯಾಚರಣೆ ವೇಳೆ ಬಂಧಿತನಾಗಿದ್ದ ಆರ್ಯನ್‌ನನ್ನು ವಿಚಾರಣೆ ಸಂಬಂಧ ಒಂದು ದಿನದ ಮಟ್ಟಿಗೆ NCB ವಶಕ್ಕೆ ಕೋರ್ಟ್ ಒಪ್ಪಿಸಿತ್ತು. ಸೋಮವಾರ ಆ ಅವಧಿ ಮುಗಿದಿದ್ದರಿಂದ ಇಂದು ಮತ್ತೆ ಕೋರ್ಟ್‌ಗೆ ಹಾಜರು ಪಡಿಸಿದ ತನಿಖಾಧಿಕಾರಿಗಳು ಮತ್ತಷ್ಟು ವಿಚಾರಣೆಗಾಗಿ ತಮ್ಮ ವಶಕ್ಕೆ ಕೋರಿದರು. ಇದೇ ಸಂದರ್ಭದಲ್ಲಿ ಜಾಮೀನು ಬಯಸಿದ್ದ ಆರ್ಯನ್‌ಗೆ ಹಿನ್ನಡೆಯಾಯಿತು.
ಸೋಮವಾರ ವಿಚಾರಣೆ ನಡೆಸಿದ ಮುಂಬೈನ ಕಿಲ್ಲಾ ಕೋರ್ಟ್ ಅಕ್ಟೋಬರ್ 7 ರವರೆಗೆ NCB ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಮುಂಬೈ ಗೋವಾ ನಡುವೆ ಸಮುದ್ರದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಶನಿವಾರ ರಾತ್ರಿ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು.