ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ತೀವ್ರಗೊಂಡಿದೆ. ನಿರಂತರ ಹೋರಾಟದ 22ನೇ ದಿನವಾದ ಇಂದು ಜಾಗತಿಕ ಸಮಾವೇಶಕ್ಕೆ ಅಡ್ಡಿಪಡಿಸುವ ಪ್ರಯತ್ನ ರೈತರಿಂದ ನಡೆದಿದೆ. ಆದರೆ ಈ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
‘G-5 ಶೃಂಗ’ಕ್ಕೆ ಟಾಂಗ್ ನೀಡಲು ಮುಂದಾದ ಕುರುಬೂರು ಸೈನ್ಯವನ್ನು ಮಾರ್ಗ ಮಧ್ಯೆಯೇ ತಡೆದ ಪೊಲೀಸರು ಹಲವು ರೈತರನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಬೀದಿ ರಂಪಾಟವೇ ನಡೆಯಿತು. ಛಲ ಬಿಡದ ಕುರುಬೂರು ಶಾಂತಕುಮಾರ್ ನೇತ್ರತ್ವದ ಕಬ್ಬು ಬೆಳೆಗಾರರು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಏನಿದು ಹೋರಾಟ..?
ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ಬಹುಕಾಲದಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಸರ್ಕಾರದ ವಿರುದ್ದ ಸಮರ ಸಾರಿರುವ ರೈತರು ರಾಜಧಾನಿ ಬೆಂಗಳೂರಿಗೆ ಲಗ್ಗೆ ಹಾಕಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಆರ್‌ಬಿಐ ಎದುರು ರಸ್ತಾ ರೋಕೋ, ಅಧಿಕಾರಿಗಳ ಮುಂದೆ ಪೊರಕೆ ಚಳುವಳಿ, ಬಾರ್‌ಕೋಲು ಚಳುವಳಿ, ಸರ್ಕಾರಿ ಕಚೇರಿ ಬಳಿ ಭತ್ತ ಸುರಿಯುವ ಸತ್ಯಾಗ್ರಹ.. ಹೀಗೆ ವಿವಿಧ ರೀತಿ ಹೋರಾಟ ನಡಸಿದರೂ ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂಧಿಸಿಲ್ಲ ಎಂಬುದು ಕುರುಬೂರು ಶಾಂತಕುಮಾರ್ ಅವರ ಆರೋಪ.
ಇದೀಗ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ರೈತರು ಪ್ರತಿಷ್ಠಿತ ‘ಜಿ-20 ಶೃಂಗಸಭೆ’ಗೆ ಕರಿ ಬಾವುಟ ಪ್ರದರ್ಶಿಸುವುದಾಗಿ ಘೋಷಿಸಿದ್ದರು. ಈ ಸಂಬಂಧ ಶೃಂಗಸಭೆ ಆಯೋಜಿತವಾಗಿರುವ ಬೆಂಗಳೂರು ಹೊರವಲಯದ ದೇವನಳ್ಳಿಯತ್ತ ರೈತರು ದೌಡಾಯಿಸುತ್ತಿದ್ದಂತೆಯೇ ಮಾರ್ಗ ಮಧ್ಯೆ ಪೊಲೀಸರು ತಡೆದಿದ್ದಾರೆ. ಕಪ್ಪು ಬಾವುಟ ಪ್ರದರ್ಶನ ಮಾಡಲು ಹೊರಟಿದ್ದ ರೈತರನ್ನು ಹೆಬ್ಬಾಳ ಬಳಿ ತಡೆದ ಪೊಲೀಸರು ಹೋರಾಟ ನಿರತರನ್ನು ಬಂಧಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ ಪಟ್ಟು ಸಡಿಲಿಸದ ಕುರುಬೂರು ಶಾಂತಕುಮಾರ್ ಸಹಿತ ರೈತರು ದೇವನಹಳ್ಳಿಯತ್ತ ಮುನ್ನುಗ್ಗುವ ಪ್ರಯತ್ನ ಮಾಡಿದರು. ಆ ವೇಳೆ ಪೊಲೀಸರು ಹೋರಾಟಗಾರರನ್ನ ಬಂಧಿಸಿ ಕರೆದೊಯ್ದರು.
ಪಟ್ಟು ಸಡಿಲಿಸದ ರೈತರು..
ರಾಜ್ಯದ ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ 22 ದಿನದಿಂದ ಧರಣಿ ಕುಳಿತಿರುವ ಕಬ್ಬು ಬೆಳೆಗಾರರು, ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದರು.
ದೇಶಾದ್ಯಂತ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು
ಕೃಷಿ ಸಾಲ ನೀತಿ ಬದಲಾಗಬೇಕು, ದೇಶದ ಜನರಿಗೆ ಆಹಾರ ಉತ್ಪಾದಿಸುವ ವಲಯವಾದ ಕಾರಣ ಕೃಷಿ ಸಾಲ ಬಡ್ಡಿರಹಿತವಾಗಿ ನೀಡಬೇಕು,
ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲ ಬಡ್ಡಿ ರಹಿತವಾಗಿ ನಿಡಬೇಕು.
ಕಬ್ಬು ಬೆಳೆಗಾರರ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ. ಪ್ರತೀ ಬಾರಿ ಹೋರಾಟ ನಡೆಸಿದಾಗಲೂ ಪೊಲೀಸರು ನಮ್ಮನ್ನು ಬಂಧಿಸಿ ಹೋರಾಟವನ್ನು ವಿಫಲಗೊಳಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೆ ನಾವು ಬೇಡಿಕೆ ಈಡೇರುವವರೆಗೂ ಹೋರಾಟ ಮಾಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

























































ಪಟ್ಟು ಸಡಿಲಿಸದ ರೈತರು..